ನೀಟ್ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಆರೋಪ : ಸಿಬಿಐ ತನಿಖೆಗೆ ಬಿಹಾರ ಸರಕಾರ ಶಿಫಾರಸು

Photo Credit : PTI
ಪಾಟ್ನಾ: ಬಿಹಾರ ರಾಜಧಾನಿ ಪಾಟ್ನಾದಲ್ಲಿ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಕೊಲೆಗೈದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಬಿಹಾರ ಸರಕಾರವು ಶನಿವಾರ ಶಿಫಾರಸು ಮಾಡಿದೆ.
ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧುರಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ರಾಜ್ಯ ಸರಕಾರದ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪ್ರಕರಣವನ್ನು ಪಾರದರ್ಶಕವಾಗಿ ಹಾಗೂ ನ್ಯಾಯುಯುತವಾಗಿ ಅನಾವರಣಗೊಳಿಸಬೇಕೆಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸೋಮವಾರ ವಿಧಾನಸಭಾ ಅಧಿವೇಶನ ಆರಂಭಗೊಳ್ಳುವುದಕ್ಕೆ ಮುಂಚಿತವಾಗಿ ಬಿಹಾರ ಸರಕಾರವು ಸಿಬಿಐ ತನಿಖೆಗೆ ಶಿಫಾರಸು ಮಾಡಿರುವುದು ಗಮನಾರ್ಹವಾಗಿದೆ. ಜೆಹನಾಬಾದ್ ಜಿಲ್ಲೆಯ ನಿವಾಸಿಗಳಾದ ಮೃತ ನೀಟ್ ವಿದ್ಯಾರ್ಥಿನಿಯ ಪಾಲಕರು ಶುಕ್ರವಾರ ಹೇಳಿಕೆಯೊಂದನ್ನು ನೀಡಿ ಅತ್ಯಾಚಾರ ನಡೆದಿರುವುದನ್ನು ನಿರಾಕರಿಸುವ ಮೂಲಕ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ ಬೆನ್ನಲ್ಲೇ ರಾಜ್ಯ ಸರಕಾರವು ಈ ನಿರ್ಧಾರವನ್ನು ಘೋಷಿಸಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ರ ಆಹ್ವಾನದ ಮೇರೆಗೆ ಅವರನ್ನು ವಿದ್ಯಾರ್ಥಿನಿಯ ಹೆತ್ತವರು ಇಂದು ಭೇಟಿಯಾಗಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಶಂಕಿತ ಆರೋಪಿಗಳ ಜೊತೆ ನಂಟು ಹೊಂದಿದ್ದು, ಪ್ರಕರಣದಲ್ಲಿ ತಮಗೆ ನ್ಯಾಯವನ್ನು ಒದಗಿಸಲು ಡಿಜಿಪಿಯ ಮಧ್ಯಪ್ರವೇಶಕ್ಕೆ ಅವರು ಡಿಜಿಪಿಗೆ ಮನವಿ ಮಾಡಿದ್ದರು.
ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್)ಗೆ ಬರೆಯಲು ಪೂರ್ವಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿಯು ಜನವರಿ 6ರಂದು ಪಾಟ್ನಾದ ಚಿತ್ರಗುಪ್ತಾ ನಗರದಲ್ಲಿರುವ ಮಹಿಳಾ ಹಾಸ್ಟೆಲ್ನ ಕೊಠಡಿಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ನೀಟ್ ಪರೀಕ್ಷೆಗೆ ತರಬೇತಿ ಪಡೆಯಲು ಆಕೆ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದರು.
ಕೆಲವು ದಿನಗಳ ಕಾಲ ಕೋಮಾವಸ್ಥೆಯಲ್ಲಿದ್ದ ಆಕೆ ಜನವರಿ 11ರಂದು ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದರು.
ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಅಧಿಕಾರಿಗಳು ಅದನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ಆಕೆಯ ಕುಟುಂಬಿಕರು ಆಪಾದಿಸಿದ್ದಾರೆ.







