ಬಿಹಾರ: ಅತ್ಯಾಚಾರ ಸಂತ್ರಸ್ತೆಯನ್ನು ಜೈಲಿನಲ್ಲೇ ವರಿಸಿದ ಆರೋಪಿ!

ಸಾಂದರ್ಭಿಕ ಚಿತ್ರ
ಪಟ್ನಾ: ವಿಧವೆ ಅತ್ತಿಗೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಆರೋಪಿಯು ಮಂಗಳವಾರ ಜೈಲಿನಲ್ಲೇ ಆಕೆಯನ್ನು ವಿವಾಹವಾಗಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ.
ನ್ಯಾಯಾಲಯದ ಸೂಚನೆಯನ್ವಯ ಜೈಲು ಅಧಿಕಾರಿಗಳು ವಿವಾಹ ಸಮಾರಂಭ ವ್ಯವಸ್ಥೆಗೊಳಿಸಿದ್ದರು. ಜೈಲು ಸಿಬ್ಬಂದಿಗಳು ಈ ವಿವಾಹಕ್ಕೆ ಸಾಕ್ಷಿಗಳಾದರೆ, ಇನ್ನಿತರ ಕೈದಿಗಳು ಈ ವಿವಾಹ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡರು.
ಜೈಲು ಸಿಬ್ಬಂದಿಗಳ ಪ್ರಕಾರ, ಆರೋಪಿಯು ಜಾಮೀನಿಗಾಗಿ ಪಾಟ್ನಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಜಾಮೀನು ಬಾಂಡ್ ಅಂಗೀಕರಿಸುವುದಕ್ಕೂ ಮುನ್ನ, ಅತ್ಯಾಚಾರ ಸಂತ್ರಸ್ತೆ ಹಾಗೂ ಅತ್ಯಾಚಾರ ಆರೋಪಿಯ ನಡುವೆ ವಿವಾಹವೇರ್ಪಟ್ಟಿದೆಯೆ ಎಂಬುದನ್ನು ಪರಿಶೀಲಿಸಬೇಕು ಎಂದು ಕೆಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ದೇಶನದನ್ವಯ, ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗಲು ಆರೋಪಿಯು ಕೆಳ ಹಂತದ ನ್ಯಾಯಾಲಯದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜೈಲು ಅಧೀಕ್ಷಕ ಓಂ ಪ್ರಕಾಶ್ ಶಾಂತಿಭೂಷಣ್, ನ್ಯಾಯಾಲಯದ ಆದೇಶದನ್ವಯ ವಿವಾಹ ಜರುಗುವುದನ್ನು ಖಾತರಿಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುಲಾಗಿತ್ತು ಎಂದು ತಿಳಿಸಿದ್ದಾರೆ.
2022ರಲ್ಲಿ ಸಂತ್ರಸ್ತ ಮಹಿಳೆಯ ಪತಿ (ಆರೋಪಿಯ ಹಿರಿಯ ಸಹೋದರ) ಮೃತಪಟ್ಟ ನಂತರ, ಅವರಿಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು. ದಿನ ಕಳೆದಂತೆ ಅವರಿಬ್ಬರೂ ಆಪ್ತರಾದರು ಹಾಗೂ ಒಟ್ಟಾಗಿ ಜೀವಿಸಲು ಪ್ರಾರಂಭಿಸಿದರು. ಆದರೆ, ಜೂನ್ 29, 2024ರಂದು ಸಂತ್ರಸ್ತ ಮಹಿಳೆಯು ಆರೋಪಿಯ ವಿರುದ್ಧ ಸ್ಥಳೀಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ, ಅವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದು, ಸಂಕೀರ್ಣಗೊಂಡಿತು. ಇದರ ಪರಿಣಾಮವಾಗಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು ಎಂದು ಆರೋಪಿ ಪರ ವಕೀಲ ಗಗನ್ ದೇವ್ ಯಾದವ್ ತಿಳಿಸಿದ್ದಾರೆ.
ಇದರ ಬೆನ್ನಿಗೇ, ಆರೋಪಿಯು ಪಾಟ್ನಾ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾನೆ.







