ಬಿಹಾರ: ಹೋಳಿ ಸಂದರ್ಭ ನಮಾಜ್ ಗಾಗಿ ಎರಡು ಗಂಟೆ ವಿರಾಮ ಕೋರಿದ ಮೇಯರ್, ‘ಭಯೋತ್ಪಾದಕಿ’ಎಂದ ಬಿಜೆಪಿ

ಅಂಜುಮ್ ಆರಾ | PC: indiatoday.in
ದರ್ಭಂಗಾ: ದರ್ಭಂಗಾದ ಮೇಯರ್ ಅಂಜುಮ್ ಆರಾ ಅವರು ಮುಸ್ಲಿಮರ ಪ್ರಾರ್ಥನೆಗೆ ಅನುಕೂಲವಾಗುವಂತೆ ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಎರಡು ಗಂಟೆಗಳ ವಿರಾಮಕ್ಕಾಗಿ ಪ್ರತಿಪಾದಿಸಿರುವುದು ಬಿಹಾರದಲ್ಲಿ ರಮಝಾನ್ ಸಂದರ್ಭದಲ್ಲಿ ಹೋಳಿ ಮತ್ತು ಶುಕ್ರವಾರದ ನಮಾಜ್ ಕುರಿತಂತೆ ಹೊಸ ವಿವಾದವನ್ನು ಸೃಷ್ಟಿಸಿದೆ.
ಇತ್ತೀಚಿಗೆ ದರ್ಭಂಗಾದಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಆರಾ ಈ ಪ್ರಸ್ತಾವವನ್ನು ಮಂಡಿಸಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಆರಾ, ‘ಜುಮಾ ನಮಾಝಿನ ಸಮಯವನ್ನು ಮುಂದೂಡಲು ಸಾಧ್ಯವಿಲ್ಲ. ಹೀಗಾಗಿ ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ವಿರಾಮವಿರಲಿ ಮತ್ತು ಈ ಅವಧಿಯಲ್ಲಿ ಹಿಂದುಗಳು ಮಸೀದಿಗಳ ಸಮೀಪದ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು ಎನ್ನುವುದು ನನ್ನ ಮನವಿಯಾಗಿದೆ. ಇದರಿಂದ ಉಭಯ ಧರ್ಮಗಳ ಜನರು ಯಾವುದೇ ತೊಂದರೆಗಳಿಲ್ಲದೆ ತಮ್ಮ ಆಚರಣೆಗಳನ್ನು ನಡೆಸಲು ಅನುಕೂಲವಾಗುತ್ತದೆ. ಹೋಳಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ ಎನ್ನುವುದು ನಮಗೆ ಗೊತ್ತಿದೆ. ಆದರೆ ಮುಸ್ಲಿಮರಿಗೆ ಇದು ಪವಿತ್ರ ರಮಝಾನ್ ಮಾಸ ಎನ್ನುವುದನ್ನೂ ನಾವು ನೆನಪಿಟ್ಟುಕೊಳ್ಳುವುದು ಅಗತ್ಯವಾಗಿದೆ’ ಎಂದು ಹೇಳಿದರು.
ಮೇಯರ್ ಹೇಳಿಕೆಯು, ಹೋಳಿ ಹಬ್ಬವು ಮುಸ್ಲಿಮರಿಗೆ ಸಮಸ್ಯೆಯಾದರೆ ಅವರು ತಮ್ಮ ಮನೆಗಳಲ್ಲಿಯೇ ಇರಬೇಕು ಎಂದು ಇತ್ತೀಚಿಗೆ ಹೇಳಿದ್ದ ನೆರೆಯ ಮಧುಬನಿ ಜಿಲ್ಲೆಯ ಬಿಜೆಪಿ ಶಾಸಕ ಹರಿಭೂಷಣ ಠಾಕೂರ್ ಬಚೌಲ್ ಅವರನ್ನು ಕೆರಳಿಸಿದೆ.
ವಿಧಾನಸಭೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಚೌಲ್,‘ನನ್ನ ವಿರುದ್ಧ ದಾಳಿ ನಡೆಸುತ್ತಿದ್ದ ಸ್ವಯಂಘೋಷಿತ ಜಾತ್ಯತೀತರು ಈಗೆಲ್ಲಿದ್ದಾರೆ? ದರ್ಭಾಂಗಾದ ಮೇಯರ್ ಘಝ್ವಾ-ಎ-ಹಿಂದ್ನ ಮಹಿಳೆಯಾಗಿದ್ದಾರೆ ಮತ್ತು ಭಯೋತ್ಪಾದಕ ಮನಃಸ್ಥಿತಿಯನ್ನು ಹೊಂದಿದ್ದಾರೆ. ಅವರ ಕುಟುಂಬಕ್ಕೆ ಇದರ ದೊಡ್ಡ ಇತಿಹಾಸವೇ ಇದೆ. ಅವರು ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಇಂತಹ ಜನರ ವಿರುದ್ಧ ಅತ್ಯಂತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಹೋಳಿ ಸಂಭ್ರಮಾಚರಣೆಯು ನಿಲ್ಲುವುದಿಲ್ಲ. ಒಂದು ನಿಮಿಷವೂ ವಿರಾಮವಿರುವುದಿಲ್ಲ. ಹೋಳಿಯನ್ನು ವೈಭವಯುತವಾಗಿ ಆಚರಿಸಲಾಗುವುದು ’ ಎಂದು ಹೇಳಿದರು.
ಮೊದಲು ದೇಶವನ್ನು ವಿಭಜಿಸಿದ್ದವರು ಮತ್ತು ಈಗ ಹಿಂದುಗಳ ಸಾಮಾಜಿಕ ಜೀವನದಲ್ಲಿ ನುಸುಳುತ್ತಿರುವವರ ವಿರುದ್ಧ ಪ್ರತೀಕಾರದ ಎಚ್ಚರಿಕೆಯನ್ನೂ ನೀಡಿದ ಬಚೌಲಾ, ಬಿಜೆಪಿಯ ಮಿತ್ರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಬಲಿಗರು ಎನ್ನಲಾಗಿರುವ ಆರಾ ಮತ್ತು ಅವರ ಕುಟುಂಬದ ಸಂದಿಗ್ಧ ಇತಿಹಾಸದ ಬಗ್ಗೆ ತನಿಖೆಗೆ ಆಗ್ರಹಿಸಿದರು.
ಹಬ್ಬಗಳನ್ನು ಯಾವಾಗ ಮತ್ತು ಹೇಗೆ ಆಚರಿಸಬೇಕು ಎನ್ನುವುದನ್ನು ಸರಕಾರವು ಜನರಿಗೆ ಹೇಳಬೇಕಾಗಿಲ್ಲ. ಈ ನಿರ್ಧಾರಗಳನ್ನು ಸಮಾಜಕ್ಕೆ ಬಿಡುವುದು ಅತ್ಯುತ್ತಮ ಮತ್ತು ಆಡಳಿತವು ಯಾವಾಗಲೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವತ್ತ ಗಮನ ಹರಿಸಬೇಕು ಎಂದು ಹಿರಿಯ ಜೆಡಿಯು ನಾಯಕ ಹಾಗೂ ಸಚಿವ ಶ್ರವಣ್ ಕುಮಾರ್ ಅವರು ಹೇಳಿದರು.
ಬಚೌಲ್ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು,ಚುನಾಯಿತ ಪ್ರತಿನಿಧಿಗಳು ಸಮಾಜದ ಒಂದು ವರ್ಗಕ್ಕೆ ನೋವನ್ನುಂಟು ಮಾಡುವ ಭಾಷೆಯನ್ನು ಎಂದಿಗೂ ಬಳಸಬಾರದು ಎಂದರು.
ಬಿಹಾರದಲ್ಲಿ ಮುಸ್ಲಿಮರ ಮೊದಲ ಆಯ್ಕೆ ಎಂದು ಪರಿಗಣಿಸಲಾಗಿರುವ ಆರ್ಜೆಡಿಯ ಶಾಸಕ ಭಾಯಿ ವೀರೇಂದ್ರ ಅವರು,ಕೋಮು ಸಾಮರಸ್ಯವನ್ನು ಕೆಡಿಸಲು ಪಟ್ಟು ಹಿಡಿದಿರುವ ಬಚೌಲ್ರಂತಹವರ ಧ್ರುವೀಕರಣ ತಂತ್ರಗಳಿಗೆ ಆರಾ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದರು.
ಈ ನಡುವೆ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ಆರಾ, ಅದರಿಂದ ಯಾರಿಗಾದರೂ ನೋವುಂಟಾಗಿದ್ದರೆ ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.