ರಾಮಚರಿತ ಮಾನಸವನ್ನು ಪೊಟ್ಯಾಷಿಯಂ ಸಯನೈಡ್ ಗೆ ಹೋಲಿಸಿದ ಬಿಹಾರ ಸಚಿವ ಚಂದ್ರಶೇಖರ್

ಶಿಕ್ಷಣ ಸಚಿವ ಚಂದ್ರಶೇಖರ್ | Photo: X
ಹೊಸದಿಲ್ಲಿ: ಗುರುವಾರ ಹಿಂದೂ ಧಾರ್ಮಿಕ ಗ್ರಂಥವಾದ ರಾಮಚರಿತ ಮಾನಸವನ್ನು ಪೊಟ್ಯಾಷಿಯಂ ಸಯನೈಡ್ ಗೆ ಹೋಲಿಸುವ ಮೂಲಕ ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಕ್ಕೆ ಗುರಿಯಾಗಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊವೊಂದರಲ್ಲಿ ಹಿಂದಿ ದಿವಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಸಚಿವ ಚಂದ್ರಶೇಖರ್, “ಒಂದು ವೇಳೆ 55 ಬಗೆಯ ಖಾದ್ಯಗಳನ್ನು ಪೂರೈಸಿ, ಅದರೊಂದಿಗೆ ಪೊಟ್ಯಾಷಿಯಂ ಸಯನೈಡ್ ಅನ್ನು ಬೆರೆಸಿದರೆ, ಅದನ್ನು ನೀವು ತಿನ್ನುತ್ತೀರಾ? ಹಿಂದೂ ಧಾರ್ಮಿಕ ಗ್ರಂಥಗಳ ವಿಚಾರದಲ್ಲೂ ಇದೇ ಆಗಿರುವುದು” ಎಂದು ಹೇಳಿರುವುದು ದಾಖಲಾಗಿದೆ.
ಹಿಂದೂ ಪುರಾಣಗಳ ಬಗ್ಗೆ ಚಂದ್ರಶೇಖರ್ ಇದೇ ಪ್ರಥಮ ಬಾರಿಗೆ ವಿವಾದಾತ್ಮಕ ಹೇಳಿಕೆ ನೀಡಿರುವುದಲ್ಲ. ಜನವರಿಯಲ್ಲೂ ಅವರು ರಾಮಚರಿತ ಮಾನಸ ಗ್ರಂಥವು ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಎಂದು ಹೇಳಿದ್ದರು ಎಂದು India Today ವರದಿ ಮಾಡಿದೆ.
“ಯಾವುದೇ ದೇಶ ಪ್ರೀತಿ ಮತ್ತು ಅಕ್ಕರೆಯಿಂದ ಶ್ರೇಷ್ಠವಾಗುತ್ತದೆ. ರಾಮಚರಿತ ಮಾನಸ, ಮನುಸ್ಮೃತಿ ಹಾಗೂ ಬಂಚ್ ಆಫ್ ಥಾಟ್ಸ್ ನಂಥ ಗ್ರಂಥಗಳು ದ್ವೇಷದ ಬೀಜವನ್ನು ಬಿತ್ತುತ್ತವೆ ಮತ್ತು ಸಮಾಜವನ್ನು ವಿಭಜಿಸುತ್ತವೆ. ಇದೇ ಕಾರಣಕ್ಕೆ ಜನರು ಮನುಸ್ಮೃತಿಯನ್ನು ಸುಟ್ಟಿದ್ದು ಹಾಗೂ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ನೀಡುವುದರ ವಿರುದ್ಧ ಮಾತನಾಡುವ ರಾಮಚರಿತ ಮಾನಸದ ಒಂದು ಭಾಗವನ್ನು ಕಿತ್ತೆಸೆದಿದ್ದು” ಎಂದು ಚಂದ್ರಶೇಖರ್ ಹೇಳಿದ್ದಾರೆ.
ಹಿಂದೂ ಧಾರ್ಮಿಕ ಗ್ರಂಥಗಳು ಹಲವಾರು ಉತ್ತಮ ಅಂಶಗಳನ್ನು ಒಳಗೊಂಡಿದ್ದರೂ, ಕೆಲವು ಸಂಗತಿಗಳಲ್ಲಿ ಅವು ಸಮಾನವಾಗಿ ಸಮಸ್ಯಾತ್ಮಕವಾಗಿವೆ. ಇದು ನನ್ನ ದೃಷ್ಟಿಕೋನ ಮಾತ್ರವಲ್ಲ; ಬದಲಿಗೆ ಹಿಂದಿ ಲೇಖಕ ನಾಗಾರ್ಜುನ ಹಾಗೂ ಸಾಮಾಜಿಕ ಚಿಂತಕ ರಾಮ್ ಮನೋಹರ್ ಲೋಹಿಯಾ ಕೂಡಾ ರಾಮಚರಿತ ಮಾನಸ ಹಲವಾರು ತಿರೋಗಾಮಿ ಚಿಂತನೆಗಳನ್ನು ಒಳಗೊಂಡಿದೆ ಎಂದು ಗುರುವಾರ ಚಂದ್ರಶೇಖರ್ ಹೇಳಿದ್ದಾರೆ.
ಇದಕ್ಕೂ ಮುನ್ನ, ವಿರೋಧ ಪಕ್ಷಗಳ ಮೈತ್ರಿಕೂಟವು ಸನಾತನ ಧರ್ಮವನ್ನು ನಾಶಪಡಿಸಲು ಯತ್ನಿಸುತ್ತಿವೆ ಎಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು.







