ಬಿಹಾರ | ಇವಿಎಂ ತಪಾಸಣೆ ಅಥವಾ ಮರು ಮತದಾನಕ್ಕೆ ವಿರೋಧ ಪಕ್ಷಗಳು ಕೋರಿಲ್ಲ: ಚುನಾವಣಾ ಆಯೋಗ

PC : PTI
ಪಾಟ್ನಾ: ಬಿಹಾರದ ವಿರೋಧ ಪಕ್ಷಗಳು ಮತಗಳ್ಳತನ ಅಥವಾ ಅಕ್ರಮ ಮತದಾನದ ಬಗೆಗಿನ ದೂರನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದ್ದು, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಇವಿಎಂ ತಪಾಸಣೆ ಅಥವಾ ಮರು ಮತದಾನಕ್ಕೆ ಚುನಾವಣಾ ಆಯೋಗದ ಬಳಿ ಮನವಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.
"ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರಗಳ ಬಳಸಿದ ಸ್ಮರಣೆ (ಬರ್ನ್ಟ್ ಮೆಮೊರಿ)/ ಮೈಕ್ರೋಕಂಟ್ರೋಲರ್ ತಪಾಸಣೆ ಮತ್ತು ದೃಢೀಕರಣಕ್ಕೆ 243 ಕ್ಷೇತ್ರಗಳಲ್ಲಿ ಯಾವುದೇ ಸೋತ ಅಭ್ಯರ್ಥಿಯಿಂದ ಮನವಿಗಳು ಬಂದಿಲ್ಲ" ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಕಾರ್ಯ ನಿರ್ವಹಿಸಿದ ಚುನಾವಣಾ ಆಯೋಗ, ಮತ ಎಣಿಕೆ ಬಳಿಕ ಬರ್ನ್ಟ್ ಮೆಮೊರಿ ತಪಾಸಣೆ ಅಥವಾ ಮೈಕ್ರೋಕಂಟ್ರೋಲರ್ ದೃಢೀಕರಣಕ್ಕೆ ನಿಗದಿತ ಕಾರ್ಯಾಚರಣೆ ವಿಧಾನ (ಎಸ್ಓಪಿ) ವನ್ನು ಜೂನ್ 17ರಂದು ಪರಿಷ್ಕರಿಸಿತ್ತು. ಇದರ ಅನ್ವಯ ಅತಿಹೆಚ್ಚು ಮತ ಗಳಿಸಿದ ಅಭ್ಯರ್ಥಿಯ ಬಳಿಕ 2 ಮತ್ತು 3ನೇ ಸ್ಥಾನದಲ್ಲಿರುವ ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ ಏಳು ದಿನಗಳ ಒಳಗಾಗಿ ದೃಢೀಕರಣಕ್ಕೆ ಮನವಿ ಸಲ್ಲಿಸಬೇಕು. ಸೋತ ಯಾವುದೇ ಅಭ್ಯರ್ಥಿಯಿಂದ ಇಂಥ ಮನವಿ ಬಂದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಅಂತೆಯೇ ವಿಶೇಷ ತೀವ್ರ ಪರಿಷ್ಕರಣೆ ಬಳಿಕ ಬಿಹಾರದ ಯಾವುದೇ 38 ಜಿಲ್ಲೆಗಳ ಯಾವೊಬ್ಬ ಮತದಾರರಿಂದ ಇಲ್ಲವೇ 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ತಪ್ಪಾಗಿ ಮತದಾರರ ಸೇರ್ಪಡೆ ಅಥವಾ ಬೇರ್ಪಡಿಸಿರುವ ಬಗ್ಗೆ ಕೂಡಾ ದೂರು ಬಂದಿಲ್ಲ ಎಂದು ಆಯೋಗ ಸಮರ್ಥಿಸಿಕೊಂಡಿದೆ.







