ಬಿಹಾರ | ನಿವೃತ್ತ ಪತ್ರಕರ್ತರ ಪಿಂಚಣಿ 9 ಸಾವಿರ ರೂ. ಏರಿಕೆ

ಸಾಂದರ್ಭಿಕ ಚಿತ್ರ
ಪಾಟ್ನಾ, ಜು. 26: ‘ಬಿಹಾರ್ ಪತ್ರಕಾರ್ ಸಮ್ಮಾನ್’ ಯೋಜನೆ ಅಡಿಯಲ್ಲಿ ನಿವೃತ್ತ ಪತ್ರಕರ್ತರ ಪಿಂಚಣಿಯನ್ನು ತಿಂಗಳಿಗೆ 9 ಸಾವಿರ ರೂ. ಏರಿಕೆ ಮಾಡುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಘೋಷಿಸಿದ್ದಾರೆ.
ಈಗ ಬಿಹಾರ ಸರಕಾರದಲ್ಲಿ ನೋಂದಣಿಯಾಗಿರುವ ಎಲ್ಲಾ ಅರ್ಹ ನಿವೃತ್ತ ಪತ್ರಕರ್ತರು ತಿಂಗಳಿಗೆ 6 ಸಾವಿರ ರೂ. ಪಿಂಚಣಿಗೆ ಬದಲು 15 ಸಾವಿರ ರೂ. ಪಿಂಚಣಿ ಪಡೆಯಲಿದ್ದಾರೆ.
ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯ ಮುನ್ನ ಈ ನಿರ್ಧಾರ ಹೊರಬಿದ್ದಿದೆ.
‘ಎಕ್ಸ್’ನ ಪೋಸ್ಟ್ನಲ್ಲಿ ಶನಿವಾರ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ‘ಬಿಹಾರ್ ಪತ್ರಕಾರ್ ಸಮ್ಮಾನ್’ ಪಿಂಚಣಿ ಯೋಜನೆಯ ಅಡಿಯಲ್ಲಿ ಎಲ್ಲಾ ಅರ್ಹ ಪತ್ರಕರ್ತರಿಗೆ ಪಿಂಚಣಿಯನ್ನು ತಿಂಗಳಿಗೆ 6 ಸಾವಿರ ರೂ. ಬದಲು 15 ಸಾವಿರ ನೀಡಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ ಎಂದು ಅವರು ಬರೆದಿದ್ದಾರೆ.
ಇದಲ್ಲದೆ, ಈ ಯೋಜನೆ ಅಡಿಯಲ್ಲಿ ಪಿಂಚಣಿ ಸ್ವೀಕರಿಸುತ್ತಿರುವ ಪತ್ರಕರ್ತರು ಮೃತಪಟ್ಟ ಸಂದರ್ಭ ಅವರ ಅವಲಂಬಿತರು/ಸಂಗಾತಿ ಜೀವಿತಾವಧಿ ವರೆಗೆ ತಿಂಗಳಿಗೆ 3 ಸಾವಿರ ರೂ.ಪಿಂಚಣಿಗೆ ಬದಲಾಗಿ 10 ಸಾವಿರ ರೂ. ಪಿಂಚಣಿ ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘‘ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಸಾಮಾಜಿಕ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಪತ್ರಕರ್ತರು ತಮ್ಮ ಕರ್ತವ್ಯಗಳನ್ನು ನಿಷ್ಪಕ್ಷವಾತವಾಗಿ ನಿರ್ವಹಿಸಲು ಹಾಗೂ ನಿವೃತ್ತಿಯ ನಂತರ ಘನತೆಯಿಂದ ಬದುಕಲು ಸಾಧ್ಯವಾಗುವಂತೆ ನಾವು ಆರಂಭದಿಂದಲೇ ಅವರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ’’ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.







