ಬಿಹಾರ ಚುನಾವಣಾ ಹಿನ್ನಡೆ: ಆರ್ಜೆಡಿ-ಕಾಂಗ್ರೆಸ್ ನಡುವೆ ಪರಸ್ಪರ ಆರೋಪ

Photo Credit: PTI
ಪಾಟ್ನಾ: 18ನೇ ಬಿಹಾರ ವಿಧಾನಸಭೆಯ ಮೊದಲ ಅಧಿವೇಶನ ನಾಳೆಯಿಂದ (ಸೋಮವಾರ) ಪ್ರಾರಂಭಗೊಳ್ಳಲಿದ್ದು, ಈ ನಡುವೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ ಹಿನ್ನಡೆಗೆ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾಘಟಬಂಧನ್ನ ಪ್ರಮುಖ ಅಂಗಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ ಪರಸ್ಪರ ದೂಷಿಸಿಕೊಳ್ಳತೊಡಗಿವೆ.
ಕಳೆದ ವಾರ ಹೊಸ ದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಬಿಹಾರ ವಿಧಾನಸಭಾ ಫಲಿತಾಂಶದ ಕುರಿತು ನಡೆದ ಚರ್ಚೆಯಲ್ಲಿ, "ಆರ್ಜೆಡಿ ಆಕ್ರಮಣಕಾರಿ ಪ್ರಚಾರ ನಡೆಸಿದ್ದರಿಂದ, ಮತ್ತೆ ಜಂಗಲ್ ರಾಜ್ ಮರಳಬಹುದು ಎಂಬ ಭೀತಿಯಿಂದ ಲಕ್ಷಾಂತರ ಮತದಾರರು ಮಹಾಘಟಬಂಧನ್ ಮೈತ್ರಿಕೂಟದಿಂದ ದೂರ ಸರಿದರು" ಎಂದು ಬಿಹಾರ ಕಾಂಗ್ರೆಸ್ ಘಟಕದ ನಾಯಕರು ಆರೋಪಿಸಿದ್ದರು.
ಈ ಆರೋಪಕ್ಕೆ ತಿರುಗೇಟು ನೀಡಿದ್ದ ಬಿಹಾರ ಆರ್ಜೆಡಿ ಘಟಕದ ಅಧ್ಯಕ್ಷ ಹಾಗೂ ಮಾಜಿ ಸಚಿವ ಮಾಂಗಿ ಲಾಲ್ ಮಂಡಲ್, 'ಆರ್ಜೆಡಿಗೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಅನಿವಾರ್ಯತೆ ಇರಲಿಲ್ಲ. ಮೇಲಾಗಿ, ಕಾಂಗ್ರೆಸ್ ಪಕ್ಷಕ್ಕೆ ಬಿಹಾರದಲ್ಲಿ ಕಾರ್ಯಕರ್ತರ ನೆಲೆಯೇ ಇಲ್ಲ. ಹೀಗಿದ್ದೂ, ಕಾಂಗ್ರೆಸ್ ಉಳಿಸಿಕೊಂಡಿರುವ ಆರು ವಿಧಾನಸಭಾ ಕ್ಷೇತ್ರಗಳು ಆರ್ಜೆಡಿಯ ಬೆಂಬಲದಿಂದ ಗೆದ್ದಿರುವುದು" ಎಂದು ತಿವಿದಿದ್ದರು.
ಈ ಆರೋಪ-ಪ್ರತ್ಯಾರೋಪಗಳ ನಡುವೆ, “ನಾವು ಎದುರಿಸಬೇಕಿರುವುದು ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನೇ ಹೊರತು, ನಮ್ಮ ನಮ್ಮಲ್ಲೇ ಕಿತ್ತಾಡಿಕೊಳ್ಳುವುದಲ್ಲ" ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ವರಿಷ್ಠರು ಬಂದಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ 243 ಸದಸ್ಯ ಬಲದ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ 202 ಸ್ಥಾನಗಳ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದರೆ, ಆರ್ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ಹೀನಾಯ ಸೋಲು ಅನುಭವಿಸಿತ್ತು. ಇದು ಆರ್ಜೆಡಿ-ಕಾಂಗ್ರೆಸ್ ನಡುವೆ ಪರಸ್ಪರ ಆರೋಪಕ್ಕೆ ಕಾರಣವಾಗಿದೆ.







