ಚುನಾವಣಾ ಆಯೋಗದಿಂದ ಬಿಹಾರ ವಿಧಾನಸಭಾ ಚುನಾವಣೆಗಾಗಿ 17 ನೂತನ ಉಪಕ್ರಮಗಳು

Photo Credit : timesofindia.indiatimes.com
ಹೊಸದಿಲ್ಲಿ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಸುಗಮವಾಗಿ ನಡೆಸಲು 17 ನೂತನ ಉಪಕ್ರಮಗಳನ್ನು ತಾನು ಜಾರಿಗೊಳಿಸಿರುವುದಾಗಿ ಚುನಾವಣಾ ಆಯೋಗವು ರವಿವಾರ ತಿಳಿಸಿದೆ. ದೇಶಾದ್ಯಂತ ಮುಂಬರುವ ಚುನಾವಣೆಗಳಲ್ಲಿಯೂ ಈ ಉಪಕ್ರಮಗಳು ಅನ್ವಯವಾಗಲಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ತಿಳಿಸಿದರು.
ಪಾಟ್ನಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ,ಬಿಹಾರಕ್ಕಾಗಿ 17 ನೂತನ ಉಪಕ್ರಮಗಳನ್ನು ತರಲಾಗಿದ್ದು,ಇವುಗಳಲ್ಲಿ ಕೆಲವನ್ನು ಚುನಾವಣೆಗಳು ನಡೆಯುವಾಗ ಮತ್ತು ಕೆಲವನ್ನು ಮತ ಎಣಿಕೆಯಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಚುನಾವಣಾ ನೋಂದಣಾಧಿಕಾರಿಗಳು(ಇಆರ್ಒ) ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. 243 ವಿಧಾನಸಭಾ ಕೇತ್ರಗಳಲ್ಲಿ ತಲಾ ಓರ್ವ ಇಆರ್ಒ ಇರುತ್ತಾರೆ. 243 ಇಆರ್ಒಗಳು ಮತ್ತು 90,207 ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್ಒ) ಸುಮಾರು 22 ವರ್ಷಗಳ ಬಳಿಕ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ಪೂರ್ಣಗೊಳಿಸಿಸದ್ದಾರೆ ಎಂದು ಅವರು ತಿಳಿಸಿದರು. ನೂತನ ಉಪಕ್ರಮಗಳಡಿ ಬಿಹಾರ ಸೇರಿದಂತೆ ದೇಶಾದ್ಯಂತದ 7,000ಕ್ಕೂ ಅಧಿಕ ಬಿಎಲ್ಒಗಳು ಮತ್ತು ಬಿಎಲ್ಒ ಮೇಲ್ವಿಚಾರಕರಿಗೆ ದಿಲ್ಲಿಯ ಐಐಐಡಿಇಎಮ್ನಲ್ಲಿ ತರಬೇತಿ ನೀಡಲಾಗಿದೆ ಎಂದರು.
ಬಿಎಲ್ಒಗಳು,ಬಿಎಲ್ಒ ಮೇಲ್ವಿಚಾರಕರು,ಮತಗಟ್ಟೆ/ಎಣಿಕೆ ಸಿಬ್ಬಂದಿಗಳು,ಸಿಎಪಿಎಫ್,ಮೆಲ್ವಿಚಾರಣಾ ತಂಡಗಳು ಮತ್ತು ಸೂಕ್ಷ್ಮ ವೀಕ್ಷಕರಿಗೆ ಸಂಭಾವನೆಯನ್ನು ದುಪ್ಪಟ್ಟು ಮಾಡಲಾಗಿದೆ. ಇದೇ ಮೊದಲ ಬಾರಿಗೆ ಇಆರ್ಒಗಳು ಮತ್ತು ಸಹಾಯಕ ಇಆರ್ಒಗಳಿಗೆ ಗೌರವ ಧನವನ್ನು ಒದಗಿಸಲಾಗಿದೆ. ಉಪಹಾರ ವೆಚ್ಚವನ್ನೂ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಮತದಾರರು ತಮ್ಮ ಮೊಬೈಲ್ ಫೋನ್ಗಳನ್ನು ಇರಿಸಲು ಮತಗಟ್ಟೆಗಳಿಗೆ ಹೊಂದಿಕೊಂಡಂತೆ ಹೊರಗೆ ಕೌಂಟರ್ಗಳನ್ನು ಸ್ಥಾಪಿಸಲಾಗುವುದು. ಕಡಿಮೆ ದಟ್ಟಣೆ,ಚಿಕ್ಕದಾದ ಸರದಿ ಸಾಲುಗಳು ಹಾಗೂ ಗಗನಚುಂಬಿ ವಸತಿ ಸಂಕೀರ್ಣಗಳು ಮತ್ತು ಸೊಸೈಟಿಗಳಲ್ಲಿ ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆಗೆ ಆಯೋಗವು ಕ್ರಮ ಕೈಗೊಳ್ಳಲಿದೆ ಎಂದು ಕುಮಾರ ತಿಳಿಸಿದರು.
ಇವಿಎಂ ಮತಪತ್ರಗಳ ಓದುವಿಕೆಯನ್ನು ಸುಗಮಗೊಳಿಸಲು ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಇದೇ ಮೊದಲ ಬಾರಿಗೆ ಇವಿಎಂಗಳು ಅಭ್ಯರ್ಥಿಗಳ ವರ್ಣ ಛಾಯಾಚಿತ್ರಗಳನ್ನು ಹೊಂದಿರಲಿವೆ ಎಂದು ಹೇಳಿದ ಅವರು,ಬಿಹಾರ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಯಲ್ಲಿಯೂ ಶೇ.100ರಷ್ಟು ವೆಬ್ಕಾಸ್ಟಿಂಗ್ ನಡೆಸಲಾಗುವುದು ಎಂದು ತಿಳಿಸಿದರು.







