ಬಿಹಾರ | ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಿಂದ ಲಕ್ಷಾಂತರ ಮಂದಿಯ ಹಕ್ಕು ಚ್ಯುತಿ: ಚುನಾವಣಾ ಆಯೋಗದ ಕ್ರಮಕ್ಕೆ ಇಂಡಿಯಾ ಒಕ್ಕೂಟ ಆಕ್ಷೇಪ

Photo: X/@INCIndia/X
ಹೊಸದಿಲ್ಲಿ: ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ, ಬಿಹಾರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ (SIR) ಚುನಾವಣಾ ಆಯೋಗ ಮುಂದಾಗಿರುವುದನ್ನು ಪ್ರಶ್ನಿಸಲು ಇಂಡಿಯಾ ಬಣದ ನಾಯಕರು ಬುಧವಾರ ಚುನಾವಣಾ ಆಯೋಗವನ್ನು ಭೇಟಿಯಾಗಿದ್ದಾರೆ.
ಒಂದು ಕ್ಷೇತ್ರದಲ್ಲಿ 'ಸಾಮಾನ್ಯವಾಗಿ ವಾಸಿಸುವ'ವರನ್ನು ಮಾತ್ರ ಒಳಗೊಳ್ಳುವ ಚುನಾವಣಾ ಆಯೋಗದ ಮಾರ್ಗಸೂಚಿಗಳು, ಬಿಹಾರದ ಮತದಾರರಲ್ಲಿ ಗಮನಾರ್ಹ ಭಾಗವಾಗಿರುವ ವಲಸಿಗ ಕಾರ್ಮಿಕರ ಮೇಲೆ ಪರಿಣಾಮ ಬೀರಬಹುದು ಎಂದು ವಿರೋಧ ಪಕ್ಷಗಳ ನಾಯಕರು ದೂರಿದ್ದಾರೆ.
ಎಸ್ಐಆರ್ ಅನ್ನು "ವಿನಾಶಕಾರಿ" ಎಂದು ಕರೆದಿರುವ ಪ್ರತಿಪಕ್ಷಗಳು, ಇದು ಹತ್ತಾರು ಲಕ್ಷ ನಿಜವಾದ ಮತದಾರರನ್ನು (ಪಟ್ಟಿಯಿಂದ) ಅಳಿಸಲು ಕಾರಣವಾಗಬಹುದು ಎಂದು ಪ್ರತಿಪಾದಿಸಿದೆ.
ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಹನ್ನೊಂದು ವಿರೋಧ ಪಕ್ಷಗಳಲ್ಲಿ ಕಾಂಗ್ರೆಸ್, ಆರ್ಜೆಡಿ, ಟಿಎಂಸಿ, ಡಿಎಂಕೆ, ಎಸ್ಪಿ, ಜೆಎಂಎಂ, ಎನ್ಸಿಪಿ-ಎಸ್ಪಿ, ಶಿವಸೇನೆ (ಯುಬಿಟಿ), ಸಿಪಿಐ (ಎಂ), ಸಿಪಿಐ ಮತ್ತು ಸಿಪಿಐ (ಎಂಎಲ್) ಲಿಬರೇಶನ್ ಸೇರಿವೆ.
Next Story





