ಬಿಹಾರ | ಸೈಬರ್ ಕ್ರೈಮ್ ಕಿಂಗ್ ಪಿನ್ ಆಗಿ ಬದಲಾದ ಚಾಯ್ ವಾಲಾ!

Photo: ITG
ಪಾಟ್ನಾ: ಅಂತಾರಾಜ್ಯ ಸೈಬರ್ ಕ್ರೈಮ್ ಜಾಲದಲ್ಲಿ ಭಾಗಿಯಾಗಿದ್ದ ಟೀ ಮಾರಾಟಗಾರ ಹಾಗೂ ಆತನ ಓರ್ವ ಸಹೋದರನನ್ನು ಗೋಪಾಲ್ ಗಂಜ್ ನಿಂದ ಬಂಧಿಸಲಾಗಿದ್ದು, ಆತನ ನಿವಾಸದಿಂದ 1.05 ಕೋಟಿ ರೂ. ಮೌಲ್ಯದ ನಗದು ಹಾಗೂ ದೊಡ್ಡ ಪ್ರಮಾಣದ ಆಭರಣಗಳನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಅಭಿಷೇಕ್ ಕುಮಾರ್ ಹಾಗೂ ಆತನ ಸಹೋದರ ಆದಿತ್ಯ ಕುಮಾರ್ ಎಂದು ಗುರುತಿಸಲಾಗಿದೆ.
ಪ್ರಮುಖ ಆರೋಪಿ ಅಭಿಷೇಕ್ ಕುಮಾರ್ ಸೈಬರ್ ಕ್ರೈಮ್ ಜಾಲದೊಂದಿಗೆ ಸೇರಿಕೊಳ್ಳುವುದಕ್ಕೂ ಮುನ್ನ ಸಣ್ಣದೊಂದು ಟೀ ಅಂಗಡಿ ನಡೆಸುತ್ತಿದ್ದ. ನಂತರ, ದುಬೈಗೆ ವಾಸ್ತವ್ಯ ಬದಲಿಸಿದ್ದ ಆತ, ಅಲ್ಲಿ ವಂಚನೆಯ ಕಾರ್ಯಾಚರಣೆಗಳಿಗೆ ಸಹಕರಿಸುತ್ತಿದ್ದ. ಇತ್ತ ಭಾರತದಲ್ಲಿ ಆತನ ಸಹೋದರ ಆದಿತ್ಯ ಕುಮಾರ್ ವಹಿವಾಟುಗಳು ಹಾಗೂ ಸರಕು ಸಾಗಣೆಯನ್ನು ನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರಾಥಮಿಕ ತನಿಖೆಯ ಪ್ರಕಾರ, ಈ ಗುಂಪು ವಂಚಕ ಮಾರ್ಗದಿಂದ ಗಳಿಸಿದ ಹಣವನ್ನು ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ, ನಂತರ ಅದನ್ನು ನಗದಾಗಿ ಪರಿವರ್ತಿಸಿಕೊಳ್ಳುತ್ತಿತ್ತು” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅವಂತಿಕಾ ದಿಲೀಪ್ ಕುಮಾರ್ ಹೇಳಿದ್ದಾರೆ.
ಈ ಜಾಲ ಬಿಹಾರವನ್ನೂ ಮೀರಿ, ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆಯ ಸಂಪರ್ಕಗಳನ್ನು ಬೆಳೆಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಈ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಇನ್ನೂ ಹಲವರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಬೆಂಗಳೂರಿನಲ್ಲಿ ವಿತರಿಸಲಾಗಿದ್ದು, ಇದರಿಂದಾಗಿ ತನಿಖಾಧಿಕಾರಿಗಳು ತಮ್ಮ ತನಿಖೆಯನ್ನು ವಿವಿಧ ರಾಜ್ಯಗಳಿಗೂ ವಿಸ್ತರಿಸಿದ್ದಾರೆ. ಈ ಖಾತೆಗಳೇನಾದರೂ ರಾಷ್ಟ್ರ ಮಟ್ಟದ ಸೈಬರ್ ಜಾಲದೊಂದಿಗೆ ಸಂಪರ್ಕ ಹೊಂದಿವೆಯೆ ಎಂಬ ಕುರಿತು ಪೊಲೀಸ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ದಾಳಿಯ ಬೆನ್ನಿಗೇ, ಈ ನಿಧಿಯ ಮೂಲಗಳು ಹಾಗೂ ಸಂಘಟಿತ ಸೈಬರ್ ಕ್ರೈಮ್ ಜಾಲದೊಂದಿಗೆ ಸಂಪರ್ಕವಿರುವ ಸಾಧ್ಯತೆಯ ಕುರಿತು ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ ಮತ್ತು ಭಯೋತ್ಪಾದನಾ ನಿಗ್ರಹ ದಳದ ತಂಡಗಳೂ ಈ ತನಿಖೆಯೊಂದಿಗೆ ಭಾಗಿಯಾಗಿವೆ.







