ಬಿಹಾರ: ವಿಷಪೂರಿತ ಮದ್ಯ ಸೇವಿಸಿ ಇಬ್ಬರು ಸಾವು

ಸಾಂದರ್ಭಿಕ ಚಿತ್ರ
ಪಾಟ್ನಾ: ಬಿಹಾರದ ಮುಝಪ್ಫರ್ಪುರ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಮತ್ತಿಬ್ಬರು ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರನ್ನು ಉಮೇಶ್ ಶಾ (50) ಹಾಗೂ ಪಪ್ಪು ರಾಮ್ (32) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡವರನ್ನು ದರ್ಮೇಂದ್ರ ಕುಮಾರ್ (26) ಹಾಗೂ ರಾಜು ಶಾಹ್ (45) ಎಂದು ಗುರುತಿಸಲಾಗಿದೆ. ಇವರಿಬ್ಬರು ಮುಝಪ್ಫರ್ಪುರದ ಎಸ್ಕೆಎಂಸಿಎಚ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಮುಝಪ್ಪರ್ಪುರ ಜಿಲ್ಲೆಯ ಕಾಝಿ ಮುಮ್ಮದ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೊಖಾರಿಯಾ ಪೀರ್ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ.
ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತರು ವಿಷಪೂರಿತ ಮದ್ಯ ಸೇವಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅವಧೇಶ್ ದೀಕ್ಷಿತ್ ತಿಳಿಸಿದ್ದಾರೆ.
Next Story





