ಬಿಹಾರ | ಪೊಲೀಸರ ಮೇಲೆ ದಾಳಿ ನಡೆಸಿ ಕ್ರಿಮಿನಲ್ ನನ್ನು ಬಂಧಮುಕ್ತಗೊಳಿಸಿದ ಗ್ರಾಮಸ್ಥರು: ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಮೃತ್ಯು

ರಾಜೀವ್ ರಂಜನ್ ಮಾಲ್ | PC: timesofindia.indiatimes.com
ಅರಾರಿಯ: ಕುಖ್ಯಾತ ಕ್ರಿಮಿನಲ್ ನೊಬ್ಬನನ್ನು ಬಂಧಿಸಿ ಕರೆದೊಯ್ಯುವಾಗ, ಗ್ರಾಮಸ್ಥರು ಪೊಲೀಸ್ ತಂಡದ ಮೇಲೆ ದಾಳಿ ನಡೆಸಿ, ಆತನನ್ನು ಬಂಧಮುಕ್ತಗೊಳಿಸಿರುವ ಆಘಾತಕಾರಿ ಘಟನೆ ಬುಧವಾರ ತಡರಾತ್ರಿ ಅರಾರಿಯ ಜಿಲ್ಲೆಯಲ್ಲಿ ನಡೆದಿದೆ. ಈ ದಾಳಿಯ ವೇಳೆ ಬಿಹಾರದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಒಬ್ಬರು ಮೃತಪಟ್ಟಿದ್ದಾರೆ.
ಅರಾರಿಯ ಜಿಲ್ಲೆಯ ಫುಲ್ಕಹ ಪ್ರದೇಶದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕುಖ್ಯಾತ ಕ್ರಿಮಿನಲ್ ಅನ್ಮೋಲ್ ಯಾದವ್ ನನ್ನು ಬಂಧಿಸಲು ಸಹಾಯಕ ಸಬ್ ಇನ್ಸ್ ಪೆಕ್ಟರ್ ರಾಜೀವ್ ರಂಜನ್ ಮಾಲ್ ನೇತೃತ್ವದ ತಂಡವೊಂದು ಸ್ಥಳಕ್ಕೆ ತೆರಳಿದ್ದಾಗ ಈ ದಾಳಿ ನಡೆದಿದೆ.
ಗ್ರಾಮಸ್ಥರ ದಾಳಿಯ ತೀವ್ರತೆಗೆ ಸ್ಥಳದಲ್ಲೇ ಕುಸಿದು ಬಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ರಾಜೀವ್ ರಂಜನ್ ಮಾಲ್, ಪ್ರಜ್ಞಾಹೀನರಾಗಿದ್ದಾರೆ. ಕೂಡಲೇ ಅವರನ್ನು ಅರಾರಿಯ ಸದರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮಾರ್ಗಮಧ್ಯನದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತ ರಾಜೀವ್ ರಂಜನ್ ಮಾಲ್ ತಮ್ಮ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಪುತ್ರಿಯರನ್ನು ಅಗಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಅಂಜನಿ ಕುಮಾರ್, ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ಘಟನೆಯ ಸಂಬಂಧ, ಗುರುವಾರ ಅನ್ಮೋಲ್ ಯಾದವ್ ನ ಆರು ಮಂದಿ ಬೆಂಬಲಿಗರನ್ನು ಬಂಧಿಸಲಾಗಿದ್ದರೂ, ಆತನ ಸುಳಿವು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಖಚಿತ ಸುಳಿವನ್ನಾಧರಿಸಿ, ಲಕ್ಷ್ಮೀಪುರ ಗ್ರಾಮದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನ್ಮೋಲ್ ಯಾದವ್ ನನ್ನು ವಶಕ್ಕೆ ಪಡೆಯಲು ರಾಜೀವ್ ರಂಜನ್ ಮಾಲ್ ಅಲ್ಲಿಗೆ ದಾಳಿ ನಡೆಸಿದ್ದರು. ಆದರೆ, ಪೊಲೀಸರು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಪ್ರಯತ್ನದಲ್ಲಿದ್ದಾಗ, ಅವರನ್ನು ಸುತ್ತುವರೆದ ಗ್ರಾಮಸ್ಥರು, ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.







