ಬಿಹಾರ | ಮಾಟ ಮಂತ್ರದ ಶಂಕೆಯಲ್ಲಿ ಒಂದೇ ಕುಟುಂಬದ ಐವರ ಸಜೀವ ದಹನ

Photo | indiatoday
ಪಾಟ್ನಾ : ಬಿಹಾರದ ಪೂರ್ಣಿಯಾದ ಹಳ್ಳಿಯೊಂದರಲ್ಲಿ ಮಾಟ ಮಂತ್ರದ ಶಂಕೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಐವರನ್ನು ಥಳಿಸಿ, ಜೀವಂತವಾಗಿ ಸುಟ್ಟುಹಾಕಿರುವ ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಪೂರ್ಣಿಯಾದ ಟೆಟ್ಗಾಮಾದಲ್ಲಿ ಇತ್ತೀಚೆಗೆ ಸಂಭವಿಸಿದ ಸಾವುಗಳು ಮತ್ತು ಜನರು ಅನಾರೋಗ್ಯಕ್ಕೆ ಒಳಗಾಗಿರುವುದಕ್ಕೆ ಈ ಕುಟುಂಬವೇ ಕಾರಣ ಎಂದು ಶಂಕಿಸಿ ಗ್ರಾಮಸ್ಥರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಒಂದೇ ಕುಟುಂಬದ ಬಾಬುಲಾಲ್ ಒರಾನ್, ಸೀತಾ ದೇವಿ, ಮಂಜೀತ್ ಒರಾನ್, ರಾನಿಯಾ ದೇವಿ ಮತ್ತು ತಪ್ಟೋ ಮೊಸ್ಮತ್ ಅವರನ್ನು ಸಜೀವ ದಹನ ಮಾಡಲಾಗಿದೆ. ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಂತ್ರಸ್ತ ಕುಟುಂಬದ ಬಾಲಕನೋರ್ವ ಘಟನೆ ವೇಳೆ ಮನೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಗ್ರಾಮಸ್ಥರು ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಬಾಲಕ ತೀವ್ರ ಆಘಾತಕ್ಕೊಳಗಾಗಿದ್ದು, ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಾಗದ ಕಾರಣ ಇನ್ನೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಪೊಲೀಸರು ಶ್ವಾನ ದಳದ ತಂಡಗಳೊಂದಿಗೆ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವುದ್ದಾರೆ.
ʼಬುಡಕಟ್ಟು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರು ʼಒರಾನ್ʼ ಸಮುದಾಯಕ್ಕೆ ಸೇರಿದವರು. ಈ ಕೊಲೆಗಳು ಝಾರ್-ಫೂಂಕ್ ಮತ್ತು ತಂತ್ರ-ಮಂತ್ರಕ್ಕೆ ಸಂಬಂಧಿಸಿವೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆʼ ಎಂದು ಪೂರ್ಣಿಯಾ ಹಿರಿಯ ಪೊಲೀಸ್ ಅಧಿಕಾರಿ ಸ್ವೀಟಿ ಸಹರಾವತ್ ಹೇಳಿದ್ದಾರೆ.







