ಚುನಾವಣಾ ಆಯೋಗ ವಂಚನೆ ತಡೆ ಸಾಫ್ಟ್ವೇರ್ ಬಳಸದ್ದರಿಂದ ಬಿಹಾರದ ಮತದಾರರ ಪಟ್ಟಿಯಲ್ಲಿ ಲಕ್ಷಾಂತರ ನಕಲಿಗಳು!

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ,ಅ.13: ಅಂತಿಮಗೊಂಡಿರುವ ಬಿಹಾರದ ಮತದಾರರ ಪಟ್ಟಿಗಳಲ್ಲಿ ಸಂಭಾವ್ಯ ವಂಚನೆ, ಪುನರಾವರ್ತಿತ ಮತದಾರರು ಮತ್ತು ತಪ್ಪು ನಮೂದುಗಳನ್ನು ಗುರುತಿಸಲು ಚುನಾವಣಾ ಆಯೋಗವು ತನ್ನಲ್ಲಿರುವ ವಿಶೇಷ ಸಾಫ್ಟ್ ವೇರ್ ಬಳಸಿರಲಿಲ್ಲ ಎನ್ನುವುದನ್ನು The Reporters' Collective (ಟಿಆರ್ಸಿ) ತನ್ನ ತನಿಖಾ ವರದಿಯಲ್ಲಿ ಬಹಿರಂಗಗೊಳಿಸಿದೆ.
ಇದು ಆಯೋಗದ ಸ್ವಂತ ಮಾರ್ಗಸೂಚಿಗಳು ಮತ್ತು ಹಿಂದಿನ ಪರಿಪಾಠಗಳ ಉಲ್ಲಂಘನೆಯಾಗಿದೆ.
ದಿಲ್ಲಿಯಲ್ಲಿನ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೋರ್ವರು ಮತ್ತು ಬಿಹಾರದಲ್ಲಿನ ನಾಲ್ವರು ಚುನಾವಣಾ ನೋಂದಣಾಧಿಕಾರಿಗಳು(ಇಆರ್ಒ) ಈ ವಿಷಯವನ್ನು ಟಿಆರ್ಸಿಗೆ ದೃಢಪಡಿಸಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ವಂಚನೆಗಳು ಮತ್ತು ನಕಲುಗಳನ್ನು ಪತ್ತೆ ಹಚ್ಚಲು ರಾಜ್ಯ ಅಧಿಕಾರಿಗಳಿಗೆ ಸಾಫ್ಟ್ವೇರ್ ಗೆ ಪ್ರವೇಶವನ್ನು ಚುನಾವಣಾ ಆಯೋಗವು ಒದಗಿಸಿರಲಿಲ್ಲ ಅಥವಾ ಕೇಂದ್ರ ಡೇಟಾ ಮಟ್ಟದಲ್ಲಿ ಈ ಪ್ರಕ್ರಿಯೆಯನ್ನು ಕೈಗೊಂಡಿರಲಿಲ್ಲ ಮತ್ತು ಭೌತಿಕ ಪರಿಶೀಲನೆಗಾಗಿ ಮತದಾರರ ಪಟ್ಟಿಗಳನ್ನು ಹಂಚಿಕೊಂಡಿರಲಿಲ್ಲ ಎಂದು ಅವರು ದೃಢಪಡಿಸಿದ್ದಾರೆ.
2024ರ ಲೋಕಸಭಾ ಚುನಾವಣೆಗಳು ಸೇರಿದಂತೆ ಈ ಎಲ್ಲ ವರ್ಷಗಳಲ್ಲಿ ಮತದಾರರ ಪಟ್ಟಿಗಳಿಂದ ಪುನರಾವರ್ತಿತ ಹೆಸರುಗಳನ್ನು ತೆಗೆದುಹಾಕಲು ಚುನಾವಣಾ ಆಯೋಗವು ಹಲವಾರು ಸಂದರ್ಭಗಳಲ್ಲಿ ಈ ಸಾಫ್ಟ್ವೇರ್ ಅನ್ನು ತನ್ನ ವಿವೇಚನೆಯಿಂದ ಬಳಸಿತ್ತು.
ಚುನಾವಣಾ ಆಯೋಗವು ಬಿಹಾರದಲ್ಲಿ ಎಸ್ಐಆರ್ ಸಮಯದಲ್ಲಿ ಈ ಸಾಫ್ಟ್ವೇರ್ ಅನ್ನು ನಿಯೋಜಿಸದ್ದರ ಪರಿಣಾಮವೇನು?
ಬಿಹಾರದ ಎಲ್ಲ 243 ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಗಳು ಈಗ 14.35 ಲಕ್ಷ ಶಂಕಿತ ಪುನರಾವರ್ತಿತ ಹೆಸರುಗಳನ್ನು ಒಳಗೊಂಡಿವೆ ಎನ್ನುವುದನ್ನು ಟಿಆರ್ಸಿ ತನ್ನ ಹಿಂದಿನ ವರದಿಯಲ್ಲಿ ಬಹಿರಂಗಗೊಳಿಸಿತ್ತು. ಈ ಪೈಕಿ 3.4 ಲಕ್ಷ ನಮೂದುಗಳಲ್ಲಿ ಹೆಸರು, ಸಂಬಂಧಿಯ ಹೆಸರು ಮತ್ತು ವಯಸ್ಸು ನಿಖರವಾಗಿ ತಾಳೆಯಾಗಿವೆ.
ಬಿಹಾರದ ಅಂತಿಮ ಮತದಾರರ ಪಟ್ಟಿಗಳಲ್ಲಿ ವಿವಿಧ ಕುಟುಂಬಗಳು, ಜಾತಿಗಳು ಮತ್ತು ಸಮುದಾಯಗಳ 1.32 ಕೋಟಿಗೂ ಅಧಿಕ ಮತದಾರರನ್ನು ಒಟ್ಟುಗೂಡಿಸಿ 20 ಮತ್ತು ಅದಕ್ಕಿಂತ ಹೆಚ್ಚಿನ ಜನರ ಗುಂಪುಗಳನ್ನಾಗಿ ಸಂಶಯಾಸ್ಪದ ಮತ್ತು ಕಾಲ್ಪನಿಕ ವಿಳಾಸಗಳಲ್ಲಿ ನೋಂದಾಯಿಸಲಾಗಿದೆ. 650ಕ್ಕೂ ಹೆಚ್ಚಿನ ಮತದಾರರನ್ನು ಒಂದುಗೂಡಿಸಿ ಮತ್ತು ತಪ್ಪಾಗಿ ನೋಂದಣಿ ಮಾಡಲಾಗಿರುವ ಕನಿಷ್ಠ 20 ಕುಟುಂಬಗಳು ಬೆಳಕಿಗೆ ಬಂದಿವೆ.
ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಗಳನ್ನು ಅಂತಿಮಗೊಳಿಸುವ ಮುನ್ನ ಪುನರಾವರ್ತಿತ ಹೆಸರುಗಳನ್ನು ತೆಗೆದುಹಾಕುವ ತನ್ನ ಡಿ-ಡುಪ್ಲಿಕೇಷನ್ ಸಾಫ್ಟ್ ವೇರ್ ಅನ್ನು ಬಳಸಿದ್ದರೆ ಈ ದೊಡ್ಡ ಪ್ರಮಾಣದ ತಪ್ಪುಗಳು ಮತ್ತು ಸಂಭಾವ್ಯ ವಂಚನೆಗಳನ್ನು ಪತ್ತೆ ಹಚ್ಚುವುದು ಸುಲಭವಾಗುತ್ತಿತ್ತು ಎಂದು ಟಿಆರ್ಸಿ ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.
ಟಿಆರ್ಸಿ ಇಮೇಲ್ ಮೂಲಕ ಕೇಳಿದ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಮತ್ತು ಬಿಹಾರದ ಮುಖ್ಯ ಚುನಾವಣಾಧಿಕಾರಿ(ಸಿಇಒ) ಉತ್ತರಿಸಿಲ್ಲ. ಟಿಆರ್ಸಿಯ ವರದಿಗಾರ ಪಾಟ್ನಾದಲ್ಲಿ ಸಿಇಒ ವಿನೋದ್ ಸಿಂಗ್ ಗುಂಜಿಯಾಲ್ ಅವರನ್ನು ಖುದ್ದಾಗಿ ಭೇಟಿಯಾದಾಗ ದಾಖಲೆಯಲ್ಲಿ ಮಾತನಾಡಲು ಅವರು ನಿರಾಕರಿಸಿದ್ದರು ಮತ್ತು ಹೊರಹೋಗುವಂತೆ ಸೂಚಿಸಿದ್ದರು. ಅವರ ಸೂಚನೆಯು ಬೆದರಿಕೆಯಿಂದ ಕೂಡಿತ್ತು. ವರದಿ ಮಾಡುವ ಮುನ್ನ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳ್ಳುತ್ತಿದೆ ಎನ್ನುವುದನ್ನು ಪರಿಗಣಿಸಿ ಎಂದು ಅವರು ಹೇಳಿದ್ದರು.
ಮಾದರಿ ನೀತಿ ಸಂಹಿತೆಯು ಪತ್ರಕರ್ತರು ವಾಸ್ತವಾಂಶಗಳನ್ನು ವರದಿ ಮಾಡುವುದನ್ನು ಅಥವಾ ಚುನಾವಣಾ ಆಯೋಗಕ್ಕೆ ಪ್ರಶ್ನೆಗಳನ್ನು ಕೇಳುವುದನ್ನು ನಿಷೇಧಿಸುವುದಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.
ಸೌಜನ್ಯ: reporters-collective.in







