ವಾಹನವನ್ನು ನಿಧಾನಕ್ಕೆ ಚಲಾಯಿಸುವಂತೆ ಹೇಳಿದ್ದ ಹಿರಿಯ ನಾಗರಿಕರೊಬ್ಬರನ್ನು ಥಳಿಸಿ ಹತ್ಯೆಗೈದ ಬೈಕ್ ಸವಾರ
ಆಘಾತಕಾರಿ ಘಟನೆಯ ವಿಡಿಯೊ ವೈರಲ್

PC : X\ @jsuryareddy
ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ, ವಾಹನವನ್ನು ನಿಧಾನವಾಗಿ ಚಲಾಯಿಸುವಂತೆ ಕಿವಿಮಾತು ಹೇಳಿದ ಹಿರಿಯ ನಾಗರಿಕರೊಬ್ಬರನ್ನು ಬೈಕ್ ಸವಾರನೊಬ್ಬ ಥಳಿಸಿ ಹತ್ಯೆಗೈದಿರುವ ಘಟನೆ ನಡೆದಿದೆ.
65 ವರ್ಷದ ಹಿರಿಯ ನಾಗರಿಕರೊಬ್ಬರು ಅಲ್ವಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ವಾಲ್ ನಲ್ಲಿ ರಸ್ತೆಯನ್ನು ದಾಟುವಾಗ, ಯುವಕನೊಬ್ಬ ಬೈಕ್ ಅನ್ನು ಅವರಿಗೆ ತಾಕಿಸಿಕೊಂಡು ಮುಂದೆ ಹೋಗಿದ್ದಾನೆ. ಆಗ, ವಾಹನವನ್ನು ನಿಧಾನಕ್ಕೆ ಚಲಾಯಿಸುವಂತೆ ಆ ವೃದ್ಧ ಪಾದಚಾರಿಯು ಯುವಕನಿಗೆ ಕಿವಿಮಾತು ಹೇಳಿದ್ದಾರೆ. ಇದರಿಂದ ಕುಪಿತಗೊಂಡಿರುವ ಯುವಕನು, ತನ್ನ ಬೈಕ್ ಅನ್ನು ರಸ್ತೆ ಬದಿ ನಿಲ್ಲಿಸಿ, ಆ ವೃದ್ಧ ಪಾದಚಾರಿಯ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವೃದ್ಧ ಪಾದಚಾರಿಯು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಎರಡು ದಿನಗಳ ಹಿಂದೆ ನಡೆದಿದ್ದ ಈ ಘಟನೆಯ ಸಿಸಿಟಿವಿ ವಿಡಿಯೊ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
A biker turns into a monster, #brutally attacked an elderly man to death, for asking the biker to slow down, captured on #CCTV.An elderly man Anjaneyulu (65) was crossing the road near Sree Bakery at temple Alwal, under #Alwal ps limits, #Hyderabad , brutally attacked by a… pic.twitter.com/ub7GN6oZNX
— Surya Reddy (@jsuryareddy) October 17, 2024
ಮೃತರನ್ನು ಆಂಜನೇಯಲು ಎಂದು ಗುರುತಿಸಲಾಗಿದ್ದು, ಅವರ ಕುಟುಂಬದ ಸದಸ್ಯರು ನೀಡಿದ ದೂರನ್ನು ಆಧರಿಸಿ ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಅಲ್ವಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಅರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಆರೋಪಿ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಘಟನೆಯ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.