ಅಕ್ರಮ ಹಣ ವರ್ಗಾವಣೆ ಪ್ರಕರಣ: ತನಿಖೆ ವೇಳೆ ಬೈಕ್ ಟ್ಯಾಕ್ಸಿ ಚಾಲಕನ ಖಾತೆಯಲ್ಲಿ 331 ಕೋಟಿ ರೂ. ಪತ್ತೆ!

Photo Credit : PTI
ಹೊಸದಿಲ್ಲಿ: ಅಕ್ರಮ ಬೆಟ್ಟಿಂಗ್ ಆ್ಯಪ್ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳು ರ್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಬ್ಯಾಂಕ್ ಖಾತೆಯಲ್ಲಿ ಎಂಟು ತಿಂಗಳುಗಳ ಅವಧಿಯಲ್ಲಿ 331 ಕೋಟಿ ರೂ.ಗೂ ಅಧಿಕ ಮೊತ್ತ ಜಮೆಯಾಗಿದ್ದನ್ನು ಪತ್ತೆ ಹಚ್ಚಿದ್ದಾರೆ.
1xbet ಆನ್ಲೈನ್ ಬೆಟ್ಟಿಂಗ್ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ರ್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಖಾತೆಯಲ್ಲಿ ಆ.19,2024ರಿಂದ ಎ.16,2025ರ ನಡುವೆ 331.36 ಕೋಟಿ ರೂ.ಜಮೆಯಾಗಿದ್ದನ್ನು ಪತ್ತೆ ಹಚ್ಚಿದ್ದಾರೆ.
ಎಂಟು ತಿಂಗಳ ಅಲ್ಪಾವಧಿಯಲ್ಲಿ ‘ಶಂಕಾಸ್ಪದ’ ಬಹುಕೋಟಿ ರೂ.ಗಳ ವಹಿವಾಟಿನಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಚಾಲಕನ ಬ್ಯಾಂಕ್ ಖಾತೆಯಲ್ಲಿ ನೀಡಲಾಗಿದ್ದ ವಿಳಾಸದ ಆಧಾರದಲ್ಲಿ ಆತನ ಮನೆಯ ಮೇಲೆ ದಾಳಿ ನಡೆಸಿದ್ದರು.
ದಿಲ್ಲಿಯ ಸಾಧಾರಣ ಪ್ರದೇಶದಲ್ಲಿ ಎರಡು ಕೋಣೆಗಳ ರೆಪಡಿಯಲ್ಲಿ ವಾಸವಾಗಿರುವ ಚಾಲಕ ಎರಡು ಹೊತ್ತಿನ ಕೂಳಿಗಾಗಿ ದಿನವಿಡೀ ಬೈಕ್ ಚಲಾಯಿಸುತ್ತಾನೆ ಎನ್ನುವುದು ತಿಳಿದುಬಂದಾಗ, ಇದು ಅಕ್ರಮ ಹಣದ ಚಲಾವಣೆಗಾಗಿ ‘ಮ್ಯೂಲ್ ಬ್ಯಾಂಕ್’ ಖಾತೆಯನ್ನು ಬಳಸಿದ ಅತ್ಯುತ್ತಮ ನಿದರ್ಶನವಾಗಿದೆ ಎನ್ನುವುದು ಅಧಿಕಾರಿಗಳಿಗೆ ತಕ್ಷಣವೇ ಗೊತ್ತಾಗಿತ್ತು.
ರಾಜಸ್ಥಾನದ ಸರೋವರ ನಗರಿ ಉದಯಪುರದ ಐಷಾರಾಮಿ ಹೋಟೆಲೊಂದರಲ್ಲಿ ನಡೆದಿದ್ದ ಅದ್ದೂರಿ ಮದುವೆ ಸಮಾರಂಭದ ವೆಚ್ಚಕ್ಕಾಗಿ ಈ 331.36 ಕೋಟಿ ರೂ.ಗಳ ಪೈಕಿ ಒಂದು ಕೋಟಿ ರೂ.ಗೂ ಅಧಿಕ ಮೊತ್ತವನ್ನು ಬಳಸಲಾಗಿತ್ತು ಎನ್ನುವುದು ಈ.ಡಿ.ಪತ್ತೆ ಹಚ್ಚಿದೆ. ಅಧಿಕಾರಿಗಳ ಪ್ರಕಾರ ಈ ಮದುವೆ ಗುಜರಾತಿನ ಯುವ ರಾಜಕಾರಣಿಗೆ ಸಂಬಂಧಿಸಿದ್ದು, ಅವರನ್ನು ಶೀಘ್ರವೇ ವಿಚಾರಣೆಗೆ ಕರೆಸಬಹುದು.
ಬ್ಯಾಂಕ್ ವಹಿವಾಟುಗಳ ಬಗ್ಗೆ ತನಗೇನೂ ತಿಳಿದಿಲ್ಲ. ಉದಯಪುರದಲ್ಲಿ ನಡೆದಿದ್ದ ತನ್ನ ಬ್ಯಾಂಕ್ ಖಾತೆಯ ಮೂಲಕ ಹಣವನ್ನು ವೆಚ್ಚ ಮಾಡಲಾದ ಮದುವೆಯಲ್ಲಿನ ವಧು-ವರ ಅಥವಾ ಅವರ ಕುಟುಂಬಗಳ ಬಗ್ಗೆಯೂ ತನಗೆ ಗೊತ್ತಿಲ್ಲ ಎಂದು ಬೈಕ್ ಚಾಲಕ ವಿಚಾರಣೆ ವೇಳೆ ಈ.ಡಿ. ಅಧಿಕಾರಿಗಳಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಚಾಲಕನ ಬ್ಯಾಂಕ್ ಖಾತೆಯು ’ಮ್ಯೂಲ್ ’ ಪ್ಲ್ಯಾಟ್ಫಾರ್ಮ್ ಆಗಿತ್ತು ಎಂದು ಈ.ಡಿ. ಶಂಕಿಸಿದೆ. ಮ್ಯೂಲ್ ಖಾತೆಯನ್ನು ಹಣಕಾಸು ಅಪರಾಧಗಳಿಂದ ಸೃಷ್ಟಿಯಾಗುವ ಅಕ್ರಮ ಹಣದ ಚಲಾವಣೆಗಾಗಿ ಬಳಸಲಾಗುತ್ತದೆ ಮತ್ತು ಖಾತೆಯ ನಿಜವಾದ ಮಾಲಿಕ ಅದರ ಬಳಕೆದಾರನಾಗಿರುವುದಿಲ್ಲ. ಅಂತಹ ಖಾತೆಗಳನ್ನು ನಕಲಿ ಅಥವಾ ಎರವಲು ಪಡೆದ ಕೆವೈಸಿಯನ್ನು ಬಳಸಿ ಮಾಡಲಾಗುತ್ತದೆ, ಇಲ್ಲಿ ವ್ಯಕ್ತಿಗಳು ಕಮಿಷನ್ ಆಸೆಗೆ ತಮ್ಮ ಖಾತೆಯನ್ನು ಬಳಸಿಕೊಳ್ಳಲು ವಂಚಕರಿಗೆ ಅವಕಾಶ ನೀಡುತ್ತಾರೆ.
ಖಾತೆಯು ಹಲವಾರು ಗುರುತಿಸಲಾಗದ ಮೂಲಗಳಿಂದ ದೊಡ್ಡ ಪ್ರಮಾಣದಲ್ಲಿ ಠೇವಣಿಗಳನ್ನು ಸ್ವೀಕರಿಸಿತ್ತು ಮತ್ತು ಅದನ್ನು ತ್ವರಿತವಾಗಿ ಇತರ ಶಂಕಾಸ್ಪದ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎನ್ನುವುದನ್ನು ಈ.ಡಿ. ಪತ್ತೆ ಹಚ್ಚಿದೆ.
ಈ ಬ್ಯಾಂಕ್ ಖಾತೆಗೆ ರವಾನಿಸಲಾಗಿದ್ದ ಹಣದ ಮೂಲವೊಂದು ಅಕ್ರಮ ಬೆಟ್ಟಿಂಗ್ಗೆ ಸಂಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಖಾತೆಯಲ್ಲಿ ನಡೆದಿದ್ದ ವಹಿವಾಟುಗಳ ಹೆಚ್ಚಿನ ಮೂಲಗಳ ಬಗ್ಗೆ ಈ.ಡಿ.ಈಗ ಪರಿಶೀಲಿಸುತ್ತಿದೆ.
ಈ.ಡಿ.ಇತ್ತೀಚಿಗೆ 1xbet ತನಿಖೆಯ ಅಂಗವಾಗಿ ಮಾಜಿ ಕ್ರಿಕೆಟಿಗರಾದ ಶಿಖರ ಧವನ್ ಮತ್ತು ಸುರೇಶ ರೈನಾ ಅವರ ಕೋಟ್ಯಂತರ ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿದ್ದು,ಇತರ ಹಲವಾರು ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳನ್ನೂ ಪ್ರಶ್ನಿಸಿತ್ತು.







