ಕಳಂಕಿತ ಮುಖ್ಯಮಂತ್ರಿಗಳು, ಸಚಿವರ ಪದಚ್ಯುತಿಗೆ ಮಸೂದೆಗಳು: ಜೆಪಿಸಿ ಬಹಿಷ್ಕರಿಸಲಿರುವ ಇಂಡಿಯಾ ಮೈತ್ರಿಕೂಟ

Photo Credit : PTI
ಹೊಸದಿಲ್ಲಿ: ತಾನು ಮತ್ತು ಇತರ ಪ್ರತಿಪಕ್ಷಗಳು ಗಂಭೀರ ಆರೋಪಗಳಲ್ಲಿ ಸತತ 30 ದಿನಗಳ ಕಾಲ ಜೈಲುಪಾಲಾದ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಪದಚ್ಯುತಗೊಳಿಸಲು ಬಯಸಿರುವ ಮೂರು ಮಸೂದೆಗಳ ಕುರಿತು ಸಂಸತ್ತಿನ ಜಂಟಿ ಸಮಿತಿಯ ಭಾಗವಾಗುವುದಿಲ್ಲ ಎಂದು ಕಾಂಗ್ರೆಸ್ ಸೋಮವಾರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರಿಗೆ ತಿಳಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಪ್ರತಿಪಕ್ಷಗಳು ಸಮಿತಿಯನ್ನು ಬಹಿಷ್ಕರಿಸಲು ಸರ್ವಾನುಮತದಿಂದ ನಿರ್ಧರಿಸಿವೆ ಎಂದೂ ಮೂಲಗಳು ತಿಳಿಸಿದವು.
ತಾವು ಸಮಿತಿಯ ಭಾಗವಾಗುವುದಿಲ್ಲ ಎಂದು ಕನಿಷ್ಠ ಮೂರು ಪಕ್ಷಗಳು-ಟಿಎಂಸಿ,ಶಿವಸೇನೆ(ಯುಬಿಟಿ) ಮತ್ತು ಆಪ್ ಈ ಹಿಂದೆಯೇ ಘೋಷಿಸಿದ್ದವು. ಸಮಾಜವಾದಿ ಪಾರ್ಟಿ(ಎಸ್ಪಿ) ಕೂಡ ಸಮಿತಿಯನ್ನು ಸೇರದಿರಲು ಪ್ರತಿಪಕ್ಷಗಳು ಒಗ್ಗಟ್ಟಿನಿಂದಿರಬೇಕು ಎಂಬ ಅಭಿಪ್ರಾಯವನ್ನು ಬೆಂಬಲಿಸುವ ಸುಳಿವನ್ನು ನೀಡಿತ್ತು.
ಮಸೂದೆಗಳನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿಯನ್ನು ಬಹಿಷ್ಕರಿಸುವ ಬಗ್ಗೆ ಯಾವುದೇ ರಾಜಕೀಯ ಪಕ್ಷವು ತನಗೆ ಲಿಖಿತವಾಗಿ ತಿಳಿಸಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕಳೆದ ತಿಂಗಳು ಸುದ್ದಿಗಾರರಿಗೆ ಹೇಳಿದ್ದರು.
ಮುಂಗಾರು ಅಧಿವೇಶನದ ಕೊನೆಯ ದಿನ ಗೃಹಸಚಿವ ಅಮಿತ್ ಶಾ ಅವರು ಕೇಂದ್ರಾಡಳಿತ ಪ್ರದೇಶಗಳ ಸರಕಾರ(ತಿದ್ದುಪಡಿ) ಮಸೂದೆ,ಸಂವಿಧಾನ(130ನೇ ತಿದ್ದುಪಡಿ) ಮಸೂದೆ ಮತ್ತು ಜಮ್ಮುಕಾಶ್ಮೀರ ಮರುಸಂಘಟನೆ(ತಿದ್ದುಪಡಿ) ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.
ಪ್ರಸ್ತಾವಿತ ಕಾನೂನುಗಳು ಗಂಭೀರ ಆರೋಪಗಳಲ್ಲಿ ಸತತ 30 ದಿನಗಳ ಕಾಲ ಬಂಧನದಲ್ಲಿರುವ ಪ್ರಧಾನಿ,ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ವಜಾಗೊಳಿಸಲು ಉದ್ದೇಶಿಸಿವೆ.
ಈ ಮಸೂದೆಗಳು ಸಂವಿಧಾನಬಾಹಿರವಾಗಿವೆ ಮತ್ತು ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ತನ್ನ ನಾಯಕರನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿ ಇಡೀ ಪ್ರತಿಪಕ್ಷವು ತೀವ್ರವಾಗಿ ಪ್ರತಿಭಟಿಸಿತ್ತು.







