ಕಾನ್ಪುರ ಮೃಗಾಲಯದಲ್ಲಿ ಹಕ್ಕಿ ಜ್ವರ ಭೀತಿ; ಅನಾರೋಗ್ಯ ತುತ್ತಾದ ಮತ್ತಷ್ಟು ಪ್ರಾಣಿಗಳು

ಸಾಂದರ್ಭಿಕ ಚಿತ್ರ
ಲಕ್ನೋ: ಕಳೆದ ವಾರ ಕಾನ್ಪುರ ಮೃಗಾಲಯದಲ್ಲಿ ಹಕ್ಕಿ ಜ್ವರದಿಂದಾಗಿ ಸಿಂಹ, ಬಾತುಕೋಳಿ ಹಾಗೂ ನವಿಲು ಸಾವನ್ನಪ್ಪಿದ ಬಳಿಕ 2 ಹೆಣ್ಣು ಹುಲಿ, 3 ಚಿರತೆ ಹಾಗೂ 1 ಕೃಷ್ಣಮೃಗ ಸೇರಿದಂತೆ ಸುಮಾರು 12ಕ್ಕೂ ಅಧಿಕ ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾಗಿವೆ. ವಿಚಿತ್ರ ನಡವಳಿಕೆಯನ್ನು ತೋರಿಸುತ್ತಿವೆ, ಆಹಾರ ಹಾಗೂ ನೀರನ್ನು ನಿರಾಕರಿಸುತ್ತಿವೆ.
ಹೆಣ್ಣು ಹುಲಿಗಳಾದ ಪುಷ್ಪಾ ಹಾಗೂ ಆದ್ಯಾವನ್ನು ಪ್ರತ್ಯೇಕ ಆವರಣದಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿ ಆವರಣದಲ್ಲಿರುವ ಪ್ರಾಣಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ ಹಾಗೂ ಪ್ರತಿ ಗಂಟೆ ಪರಿಶೀಲಿಸಲಾಗುತ್ತಿದೆ.
ಅನೇಕ ಪ್ರಾಣಿಗಳ ಸ್ಥಿತಿ ಹದಗೆಡುತ್ತಿವೆ. ಹೆಚ್ಚಿನ ಪ್ರಾಣಿಗಳು ಅನಾರೋಗ್ಯದ ಲಕ್ಷಣವನ್ನು ತೋರಿಸುತ್ತಿವೆ. ಇದು ಕಳವಳಕ್ಕೆ ಕಾರಣವಾಗಿದೆ ಎಂದು ಕಾನ್ಪುರ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 12 ಪ್ರಾಣಿಗಳ ಮಾದರಿಗಳನ್ನು ಮೃಗಾಲಯದಲ್ಲಿರುವ ನೀರಿನಾಗರಗಳ ನೀರಿನ ಮಾದರಿಯೊಂದಿಗೆ ಬೋಪಾಲದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಎನಿಮಲ್ ಡಿಸೀಸಸ್ (ಎನ್ಐಎಚ್ಎಸ್ಎಡಿ)ಗೆ ಕಳುಹಿಸಿ ಕೊಡಲಾಗಿದೆ ಎಂದು ಮೃಗಾಲಯದ ನಿರ್ದೇಶಕರಾದ ಶ್ರದ್ಧಾ ಯಾದವ್ ತಿಳಿಸಿದ್ದಾರೆ.
ಇನ್ನೊಂದು ಹೆಣ್ಣು ಹುಲಿ ಹಾಗೂ ಚಿರತೆಯ ಮಾದರಿಯನ್ನು ಕೂಡ ವಿಶ್ಲೇಷಣೆಗೆ ಭೋಪಾಲಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.