ಜಗತ್ತಿನ ಅತ್ಯಂತ ಮಾಲಿನ್ಯಕಾರಕ ನಗರ ಮೇಘಾಲಯದ ಬಿರ್ನಿಹಾಟ್!

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಸ್ವಿಟ್ಸರ್ಲ್ಯಾಂಡ್ನ ಸಂಸ್ಥೆ ಐಕ್ಯೂಏರ್ನ 2024ರ ವಾರ್ಷಿಕ ಮಾಲಿನ್ಯ ವರದಿಯ ಪ್ರಕಾರ, ಮೇಘಾಲಯದ ಬಿರ್ನಿಹಾಟ್ ನಗರವು ಜಗತ್ತಿನ ಅತ್ಯಂತ ಮಾಲಿನ್ಯಕಾರಿ ನಗರವಾಗಿದೆ!
ದಿಲ್ಲಿಯ ವಾಯುಮಾಲಿನ್ಯವನ್ನು ಬಲ್ಲ ಜನರಿಗೆ ಈ ಸುದ್ದಿ ಆಶ್ಚರ್ಯವೆನಿಸಬಹುದು. ಆದರೆ, ದಿಲ್ಲಿಯ ಜನರು ಹೆಚ್ಚು ಖುಷಿ ಪಡುವ ಅಗತ್ಯವೇನಿಲ್ಲ. ಅತ್ಯಂತ ಮಾಲಿನ್ಯಕಾರಕ ನಗರಗಳ ಪಟ್ಟಿಯಲ್ಲಿ ದಿಲ್ಲಿ ಎರಡನೇ ಸ್ಥಾನದಲ್ಲಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಬಿರ್ನಿಹಾಟನ್ನು ಭಾರತದ ಅತ್ಯಂತ ಮಾಲಿನ್ಯಕಾರಿ ನಗರ ಪ್ರದೇಶ ಎಂಬುದಾಗಿ ಸತತ ಎರಡನೇ ವರ್ಷ ಘೋಷಿಸಿದೆ. ಈ ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 302 ಆಗಿದ್ದು, ನಗರವು ‘‘ತೀರಾ ಅತೃಪ್ತಿಕರ’’ ವರ್ಗದಲ್ಲಿದೆ.
ಹೆಚ್ಚುತ್ತಿರುವ ಮಾಲಿನ್ಯ ಮಟ್ಟದ ನಡುವೆಯೇ, ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅಧ್ಯಕ್ಷತೆಯಲ್ಲಿ ಮೇ 1ರಂದು ನಡೆದ ಮೇಘಾಲಯ ಸಚಿವ ಸಂಪುಟ ಸಭೆಯು, ರಾಜ್ಯಾದ್ಯಂತ ವಾಹನಗಳ ಹೊಗೆಯನ್ನು ಕಡಿಮೆಗೊಳಿಸುವ ಉದ್ದೇಶದ ವಾಹನವನ್ನು ಬಳಕೆಯಿಂದ ಹಿಂದೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ನೀತಿಯೊಂದನ್ನು ಅಂಗೀಕರಿಸಿತು. ಈ ನೀತಿಯು ಹಳೆಯ ಮತ್ತು ಕ್ಷಮತೆ ಇಲ್ಲದ ವಾಹನಗಳನ್ನು ಬಳಕೆಯಿಂದ ಹೊರಗಿಡಬೇಕೆಂದು ಹೇಳುತ್ತದೆ. ಈ ನೀತಿಗೆ ಅನುಗುಣವಾಗಿ, ಸುಮಾರು 13,000 ಕಾರುಗಳು ರಸ್ತೆಗೆ ಇಳಿಯುವಂತಿಲ್ಲ.
ಹೊಗೆ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ, ಇಂಧನ ಆಮದನ್ನು ಇಳಿಸುವ ಮತ್ತು ಕಚ್ಚಾವಸ್ತು ಉತ್ಪಾದನೆಯ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡಲು ಈ ನೀತಿ ಸಹಾಯ ಮಾಡುತ್ತದೆ ಎಂದು ಸರಕಾರದ ವಕ್ತಾರ ಪೌಲ್ ಲಿಂಗ್ಡೊ ತಿಳಿಸಿದರು.







