ಬಿಜೆಡಿಯ ಹಿರಿಯ ನಾಯಕಿ ವಿ. ಸುಜ್ಞಾನ ಕುಮಾರಿ ನಿಧನ
10 ಸಲ ಶಾಸಕಿಯಾಗಿದ್ದ ‘ಖಲ್ಲಿಕೋಟ್ ರಾಣಿ’

ವಿ. ಸುಜ್ಞಾನ ಕುಮಾರಿ ದೇವೊ
ಭುವನೇಶ್ವರ : ಬಿಜು ಜನತಾದಳದ (ಬಿಜೆಡಿ) ಹಿರಿಯ ನಾಯಕಿ ಹಾಗೂ ಒಡಿಶಾ ವಿಧಾನಸಭೆಯಲ್ಲಿ 10 ಬಾರಿ ಶಾಸಕಿಯಾಗಿದ್ದ ವಿ. ಸುಜ್ಞಾನ ಕುಮಾರಿ ದೇವೊ ಅವರು ಶನಿವಾರ ನಸುಕಿನ ವೇಳೆ ನಿಧನರಾದರು. ಅನಾರೋಗ್ಯದ ಕಾರಣ ಅವರು ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು
87 ವರ್ಷ ವಯಸ್ಸಿನ ಸುಜ್ಞಾನ ಕುಮಾರಿ ಅವರು ಖಲ್ಲಿಕೋಟ್ ರಾಜಮನೆತನಕ್ಕೆ ಸೇರಿದವರು. 10 ಸಲ ಶಾಸಕಿಯಾಗಿ ಚುನಾಯಿತರಾಗಿದ್ದರೂ, ಸಚಿವೆಯಾಗಲು ಅವರು ನಿರಾಕರಿಸಿದ್ದರು. ಪಕ್ಷಬೇದ ಮೀರಿ ಭಾರೀ ಜನಬೆಂಬಲವನ್ನು ಹೊಂದಿದ್ದ ಅವರು ‘ ಖಲ್ಲಿಕೋಟ್ ರಾಣಿ ’ಎಂದೇ ಜನಪ್ರಿಯರಾಗಿದ್ದರು.
1961ರಲ್ಲಿ ಒಡಿಶಾ ವಿಧಾನಸಭೆಗೆ ಮೊದಲ ಬಾರಿಗೆ ಅವರು ಚುನಾಯಿತರಾಗಿದ್ದರು.ಅವಾಗಿನಿಂದ ಹಿಡಿದು 2019ರವರೆಗೆ ಅವರು 10 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೀಗೆ ಅವರು ಸುಮಾರು 6 ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದರು.
ಖಾಲಿಕೋಟೆ ವಿಧಾನಸಭಾ ಕ್ಷೇತ್ರದಿಂದ ಅವರು ಎಂಟು ಬಾರಿ ಚುನಾಯಿತರಾಗಿದ್ದರು. 2009ರಲ್ಲಿ ಕ್ಷೇತ್ರಪುನರ್ವಿಂಗಡಣೆಯಾದಾಗ ಖಲ್ಲಿಕೋಟ್ ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಅವರು ನೆರೆಯ ಜಿಲ್ಲೆಯಾದ ಕಬಿಸೂರ್ಯನಗರದಿಂದ ಸ್ಪರ್ಧಿಸಿ, ಜಯ ಗಳಿಸಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಅವರು ಕೊನೆಯ ಬಾರಿಗೆ ಸ್ಪರ್ಧಿಸಿದ್ದರು.
ಮೂಲತಃ ತಮಿಳುನಾಡಿನವರಾದ ಸುಜ್ಞಾನ ಕುಮಾರಿ ಅವರು ಖಲ್ಲಿಕೋಟ್ ರಾಜವಂಶಸ್ಥ ಪೂರ್ಣಚಂದ್ರ ಮರ್ದರಾಜ್ ದೇವ್ ಅವರನ್ನು ವಿವಾಹವಾಗಿದ್ದರು. ಸುಜ್ಞಾನ ಅವರು ಒಡಿಶಾ ರಾಜ್ಯ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಾಜಾರಾಮಚಂದ್ರ ಮರ್ದರಾಜ ದೇವ ಅವರ ಸೊಸೆ.
ಸುಜ್ಞಾನಕುಮಾರಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.







