ತೆಲಂಗಾಣ: ಶಾಸಕ ಟಿ. ರಾಜಾ ಸಿಂಗ್ ಅವರ ರಾಜೀನಾಮೆ ಅಂಗೀಕರಿಸಿದ ಬಿಜೆಪಿ

ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ (PTI)
ಹೈದರಾಬಾದ್ : ತೆಲಂಗಾಣದ ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರ ರಾಜೀನಾಮೆಯನ್ನು ಪಕ್ಷದ ರಾಷ್ಟ್ರೀಯ ನಾಯಕತ್ವ ಅಂಗೀಕರಿಸಿದೆ ಎಂದು ವರದಿಯಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ರಾಜಾ ಸಿಂಗ್ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ʼನಿಮ್ಮ ರಾಜೀನಾಮೆ ಪತ್ರ ನಮಗೆ ತಲುಪಿದೆ. ನೀವು ಉಲ್ಲೇಖಿಸಿರುವ ವಿಷಯಗಳು ಅಪ್ರಸ್ತುತ ಮತ್ತು ಪಕ್ಷದ ಕಾರ್ಯವೈಖರಿ, ಸಿದ್ಧಾಂತ ಮತ್ತು ತತ್ವಗಳಿಗೆ ಹೊಂದಿಕೆಯಾಗುವುದಿಲ್ಲ. ಬಿಜೆಪಿ ಅಧ್ಯಕ್ಷರಾದ ನಡ್ಡಾ ಅವರ ನಿರ್ದೇಶನದಂತೆ, ನಿಮ್ಮ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆʼ ಎಂದು ಅರುಣ್ ಸಿಂಗ್ ಹೇಳಿದ್ದಾರೆ.
ರಾಮಚಂದರ್ ರಾವ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಟಿ ರಾಜಾ ಸಿಂಗ್ ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಅವರಿಗೆ ರಾಜೀನಾಮೆ ನೀಡಿದ್ದರು.





