Maharashtra| ಅಚಲ್ಪುರ್ ಪುರಸಭೆ: ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗಾಗಿ ಬಿಜೆಪಿ–ಎಐಎಂಐಎಂ–ಕಾಂಗ್ರೆಸ್ ಮೈತ್ರಿ!

ನಾಗ್ಪುರ,ಜ. 22: ತಮ್ಮ ಪಕ್ಷಗಳ ಉನ್ನತ ನಾಯಕತ್ವ ಇಂತಹ ರಾಜಕೀಯ ಹೊಂದಾಣಿಕೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಚಲ್ಪುರ್ ಪುರಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುವ ಉದ್ದೇಶದಿಂದ ಬಿಜೆಪಿ, ಎಐಎಂಐಎಂ ಮತ್ತು ಕಾಂಗ್ರೆಸ್ ಪರಸ್ಪರ ಮೈತ್ರಿ ಮಾಡಿಕೊಂಡಿವೆ.
ಅಚಲ್ಪುರ್ ಪುರಸಭೆಯಲ್ಲಿ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ 41 ಸ್ಥಾನಗಳ ಪೈಕಿ ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 9 ಹಾಗೂ ಎಐಎಂಐಎಂ 3 ಸ್ಥಾನಗಳನ್ನು ಪಡೆದಿವೆ. ಸ್ವತಂತ್ರ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದಿದ್ದು, ಪ್ರಹಾರ್ ಜನಶಕ್ತಿ ಪಕ್ಷ ಮತ್ತು ಎನ್‌ಸಿಪಿ ತಲಾ 2 ಸ್ಥಾನಗಳನ್ನು ಪಡೆದಿವೆ.
ಈ ಮೈತ್ರಿಯ ಪರಿಣಾಮವಾಗಿ, ಶಿಕ್ಷಣ ಮತ್ತು ಕ್ರೀಡಾ ಸಮಿತಿಯ ಅಧ್ಯಕ್ಷರಾಗಿ ಎಐಎಂಐಎಂನ ಕೌನ್ಸಿಲರ್ ಅವಿರೋಧವಾಗಿ ಆಯ್ಕೆಯಾದರು. ನೀರು ಸರಬರಾಜು ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಸದಸ್ಯರು ಪಡೆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಮುಖ್ಯಸ್ಥರಾಗಿ ಬಿಜೆಪಿ ಕೌನ್ಸಿಲರ್ ಆಯ್ಕೆಯಾದರು.
ಈ ಮೈತ್ರಿಯನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಅಚಲ್ಪುರ್‌ನ ಬಿಜೆಪಿ ಶಾಸಕ ಪ್ರವೀಣ್ ತಯಾಡೆ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ವಾರ್ಡ್ ಸಂಖ್ಯೆ–1ರ ಚುನಾವಣಾ ಜವಾಬ್ದಾರಿಯನ್ನು ಮಾತ್ರ ತಮಗೆ ನೀಡಲಾಗಿತ್ತು ಎಂದು ಅವರು ತಿಳಿಸಿದರು.
ತಾವು ಹಿಂದುತ್ವ ಸಿದ್ಧಾಂತವನ್ನು ನಂಬುವ ಶಾಸಕರಾಗಿದ್ದು, ಪಕ್ಷವೂ ಅದನ್ನೇ ಅನುಸರಿಸುತ್ತದೆ ಎಂದು ತಯಾಡೆ ಹೇಳಿದರು. ಆದರೆ ಪಕ್ಷದ ಹಿರಿಯರು ಈ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಂಡರೆ, ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ, ಅಕೋಲಾ ಜಿಲ್ಲೆಯ ಅಕೋಟ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಬಿಜೆಪಿ ಎಐಎಂಐಎಂ ಜೊತೆ ಮೈತ್ರಿಗೆ ಬಂದಿದ್ದರೂ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಆಕ್ಷೇಪದ ಬಳಿಕ ಆ ಹೊಂದಾಣಿಕೆಯನ್ನು ರದ್ದುಗೊಳಿಸಲಾಗಿತ್ತು. ಅಂಬರ್ನಾಥ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಶಿವಸೇನೆಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಕೈಜೋಡಿಸಿದ್ದ ಘಟನೆಯೂ ಇತ್ತೀಚೆಗೆ ಚರ್ಚೆಗೆ ಕಾರಣವಾಗಿತ್ತು.







