ಮಹಾರಾಷ್ಟ್ರ: ಬಿಜೆಪಿ ಸಚಿವರಿಗೆ ಆರೆಸ್ಸೆಸ್ ಕಡೆಯಿಂದ ಆಪ್ತ ಸಹಾಯಕರ ನೇಮಕ

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ (PTI)
ಮುಂಬೈ : ಮಹಾಯುತಿ ಸರ್ಕಾರದಲ್ಲಿನ ಎಲ್ಲಾ 19 ಬಿಜೆಪಿ ಸಚಿವರಿಗೆ ಆರೆಸ್ಸೆಸ್ ಕಡೆಯಿಂದ ಆಪ್ತ ಸಹಾಯಕರನ್ನು ನೇಮಿಸಲಾಗಿದೆ. ಸರಕಾರದಲ್ಲಿ ಉತ್ತಮ ಸಮನ್ವಯ, ಮಹಾಯುತಿ ಸರ್ಕಾರದ ಭಾಗವಾಗಿ ತಾವು ಕೂಡ ಇದ್ದೇವೆ ಎಂಬ ಭಾವನೆಯನ್ನು ಸಂಘದ ಕಾರ್ಯಕರ್ತರಲ್ಲಿ ಮೂಡಿಸುವ ದೃಷ್ಟಿಯಿಂದ ಆಪ್ತ ಸಹಾಯಕರನ್ನು ನೇಮಿಸಲಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ನಡುವಿನ ಯಾವುದೇ ಬಿಕ್ಕಟ್ಟಿನ ನಿವಾರಣೆಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿರುವುದಾಗಿ ಸಂಘದ ಮೂಲಗಳು ಹೇಳಿರುವುದಾಗಿ indianexpress.com ವರದಿ ಮಾಡಿದೆ.
ಇದಲ್ಲದೆ ಬಿಜೆಪಿಯ ಹಿರಿಯ ನಾಯಕ ಸುಧೀರ್ ದೇವಳ್ಗಾಂವ್ಕರ್ ಅವರನ್ನು ದೇವೇಂದ್ರ ಫಡ್ನವೀಸ್ ಸರ್ಕಾರ ಮತ್ತು ಸಂಘದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಮುಖ್ಯ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಅವರು ಬಿಜೆಪಿ ಕಚೇರಿಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ. ಇವರು ಸಚಿವರು ಮತ್ತು ಕಾರ್ಯಕರ್ತರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬುವುದನ್ನು ಸ್ವತಃ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವಂಕುಲೆ ಹೇಳಿದ್ದಾರೆ.
ಇತ್ತೀಚೆಗೆ ಹೊರಡಿಸಲಾದ ಹೊಸ ಸಾಮಾನ್ಯ ಆಡಳಿತ ಇಲಾಖೆಯ ನಿಯಮಗಳು ಮಹಾರಾಷ್ಟ್ರದ ಮಂತ್ರಿಗಳು ಸರ್ಕಾರಿ ಸೇವೆಯಲ್ಲಿರುವ ಮೂವರನ್ನು ವಿಶೇಷ ಕರ್ತವ್ಯಾಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದಲ್ಲದೆ ಇನ್ನು ಮೂವರು ಆಪ್ತ ಸಹಾಯಕರನ್ನು ನೇಮಿಸಿಕೊಳ್ಳಬಹುದಾಗಿದೆ. ಅವರಲ್ಲಿ ಇಬ್ಬರು ಸರ್ಕಾರಿ ಉದ್ಯೋಗಿಗಳಾಗಿರಬೇಕಾಗಿಲ್ಲ. ಸಂಘ ಮತ್ತು ಸರ್ಕಾರದ ನಡುವೆ ಸಂಪರ್ಕ ಕೊಂಡಿಯಾಗಿ ಆರೆಸ್ಸೆಸ್ ಕಡೆಯಿಂದ ನೇಮಕಗೊಂಡ ಸಚಿವರ ಆಪ್ತ ಸಹಾಯಕರಿಗೆ ಸರ್ಕಾರವೇ ವೇತನವನ್ನು ನೀಡಲಿದೆ. ಸಂಘದ ಕಡೆಯಿಂದ ಸಚಿವರ ಅಪ್ತ ಸಹಾಯಕರಾಗಿ ನೇಮಕಗೊಂಡಿರುವವರು ಬಿಜೆಪಿ ಕಾರ್ಯಕರ್ತರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವಂಕುಲೆ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸುಧೀರ್ ದೇವಳ್ಗಾಂವ್ಕರ್, ಸರ್ಕಾರ ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಸಮನ್ವಯ ಉತ್ತಮವಾಗಿರುವಂತೆ ನೋಡಿಕೊಳ್ಳಲು ತಮ್ಮನ್ನು ನೇಮಿಸಲಾಗಿದೆ. ಬಿಜೆಪಿಯಿಂದ ಯಾರಾದರೂ ಯಾವುದೇ ನಿಜವಾದ ಸಮಸ್ಯೆಗಳ ಬಗ್ಗೆ ಹೇಳಿದರೆ ಅದನ್ನು ಸಂಬಂಧಪಟ್ಟ ಸಚಿವಾಲಯಕ್ಕೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ.
ಸಂಘದ ಕಡೆಯಿಂದ ಆಪ್ತ ಸಹಾಯಕರ ನೇಮಕ ಬಿಜೆಪಿ ಸಚಿವರಿಗೆ ಮಾತ್ರ ಸೀಮಿತವಾಗಿದೆ. ಶಿವಸೇನೆ ಮತ್ತು ಎನ್ ಸಿಪಿ ಸಚಿವರು ತಮ್ಮದೇ ಆದ ವ್ಯಕ್ತಿಗಳನ್ನು ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳಲು ಸ್ವತಂತ್ರರಾಗಿದ್ದಾರೆ. ಬಿಜೆಪಿ ಅಥವಾ ಆರೆಸ್ಸೆಸ್ ಕಾರ್ಯಕರ್ತರು ಹೇಳುವ ಸಮಸ್ಯೆಗಳು ಶಿವಸೇನೆ ಮತ್ತು ಎನ್ ಸಿಪಿ ಸಚಿವರಿಗೆ ಸಂಬಂಧಿಸಿದ್ದರೆ, ಹಿರಿಯ ಬಿಜೆಪಿ ಸಚಿವರು ಅವುಗಳನ್ನು ಬಗೆಹರಿಸಲಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ವರದಿಯಲ್ಲಿದೆ.
ಈ ನೇಮಕಾತಿಗಳ ಹಿಂದಿನ ಉದ್ದೇಶ ಪಕ್ಷದ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನೇರ ಅವಕಾಶ ಕಲ್ಪಿಸುವುದಾಗಿದೆ. ಯಾವುದೇ ರಹಸ್ಯ ಅಜೆಂಡಾ ಇದರ ಹಿಂದೆ ಇಲ್ಲ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.







