ʼಮಾತಾ ವೈಷ್ಣೋದೇವಿ ವಿವಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸಿʼ: ಜಮ್ಮುಕಾಶ್ಮೀರ ಲೆ. ಗವರ್ನರ್ ಗೆ ಬಿಜೆಪಿ ಆಗ್ರಹ

ಮನೋಜ್ ಸಿನ್ಹಾ | Photo Credit : PTI
ಶ್ರೀನಗರ: ಅತ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮ್ ವಿದ್ಯಾರ್ಥಿಗಳು ಸೀಟುಗಳನ್ನು ಪಡೆದಿರುವ ಎಂಬಿಬಿಎಸ್ ಪ್ರವೇಶ ಪಟ್ಟಿಯನ್ನು ರದ್ದುಗೊಳಿಸುವಂತೆ ಮತ್ತು ಕತ್ರಾದ ಶ್ರೀ ಮಾತಾ ವೈಷ್ಣೋದೇವಿ ವಿವಿಯಲ್ಲಿನ (ಎಸ್ಎಂವಿಡಿಯು) ಎಲ್ಲ ಸೀಟುಗಳನ್ನು ಹಿಂದುಗಳಿಗೆ ಮೀಸಲಿರಿಸುವಂತೆ ಕೋರಿ ಬಿಜೆಪಿಯು ಸಲ್ಲಿಸಿದ್ದ ಅಹವಾಲನ್ನು ಜಮ್ಮುಕಾಶ್ಮೀರದ ಲೆಫ್ಟಿನಂಟ್ ಗವರ್ನರ್(ಎಲ್ಜಿ) ಮನೋಜ್ ಸಿನ್ಹಾ ಅವರು ಸ್ವೀಕರಿಸಿದ್ದು,ಇದಕ್ಕೆ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಸೇರಿದಂತೆ ಜಮ್ಮುಕಾಶ್ಮೀರದ ರಾಜಕೀಯ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ.
ಶನಿವಾರ ಸಂಜೆ ಜಮ್ಮುವಿನ ರಾಜಭವನದಲ್ಲಿ ಸಿನ್ಹಾರನ್ನು ಭೇಟಿಯಾದ ವಿಧಾನಸಭೆಯಲ್ಲಿ ವಿಪಕ್ಷ ನಾಯಕರೂ ಆಗಿರುವ ಹಿರಿಯ ಬಿಜೆಪಿ ನಾಯಕ ಸುನೀಲ್ ಶರ್ಮಾ ನೇತೃತ್ವದ ಐವರು ಸದಸ್ಯರ ಬಿಜೆಪಿ ನಿಯೋಗವು,ಶ್ರೀ ಮಾತಾ ವೈಷ್ಣೋ ದೇವಿ ದೇವಸ್ಥಾನ ಮಂಡಳಿಯ ನಿಯಮಗಳನ್ನು ತಿದ್ದುಪಡಿಗೊಳಿಸಲು ಮತ್ತು ವಿವಿಯಲ್ಲಿಯ ಸ್ಥಾನಗಳನ್ನು ಹಿಂದುಗಳಿಗೆ ಮಾತ್ರ ಮೀಸಲಿರಿಸಲು ಅವರ ಹಸ್ತಕ್ಷೇಪವನ್ನು ಕೋರಿದೆ.
‘ಈ ವರ್ಷದ ಪ್ರವೇಶ ಪಟ್ಟಿಯಲ್ಲಿರುವ ಹೆಚ್ಚಿನ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದು,ಇದರ ವಿರುದ್ಧ ನಾವು ಪ್ರತಿಭಟಿಸಿದ್ದೇವೆ. ವಿವಿಯು ಧಾರ್ಮಿಕ ಸಂಸ್ಥೆಯಾಗಿದ್ದು, ಜನರು ಅದರೊಂದಿಗೆ ವಿಶ್ವಾಸ ಮತ್ತು ನಂಬಿಕೆಗಳನ್ನು ಹೊಂದಿದ್ದಾರೆ. ಭಕ್ತರು ತಮ್ಮ ನಂಬಿಕೆಯಿಂದಾಗಿಯೇ ಈ ಧಾರ್ಮಿಕ ಸಂಸ್ಥೆಗೆ ದೇಣಿಗೆಗಳನ್ನು ನೀಡುತ್ತಾರೆ. ಆದರೆ ಮಂಡಳಿ ಮತ್ತು ವಿವಿ ಅವರ ನಂಬಿಕೆಗಳನ್ನು ಪರಿಗಣಿಸಿಲ್ಲ. ಮಾತಾ ವೈಷ್ಣೋದೇವಿಯಲ್ಲಿ ನಂಬಿಕೆಯನ್ನು ಹೊಂದಿರುವವರು ಮಾತ್ರ ಪ್ರವೇಶ ಪಡೆಯಬೇಕು ಎಂದು ನಾವು ಲೆಫ್ಟಿನಂಟ್ ಗವರ್ನರ್ಗೆ ಸ್ಪಷ್ಟ ಪಡಿಸಿದ್ದೇವೆ’ ಎಂದು ಶರ್ಮಾ ಹೇಳಿದರು.
ಜಮ್ಮುವಿನಲ್ಲಿಯ ಬಿಜೆಪಿ ಮತ್ತು ಬಲಪಂಥೀಯ ಪಕ್ಷಗಳು 50 ಅರ್ಹ ವಿದ್ಯಾರ್ಥಿಗಳ ಪೈಕಿ 42 ಮುಸ್ಲಿಮರಿರುವ ಪ್ರವೇಶ ಪಟ್ಟಿಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿವೆ.
ಮಂಡಳಿಯ ಅಧ್ಯಕ್ಷರೂ ಆಗಿರುವ ಎಲ್ಜಿಯವರ ನಡೆಯು ಹಲವಾರು ರಾಜಕೀಯ ಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ಎಲ್ಜಿ ಇಂತಹ ವಿಭಜಕ ಮತ್ತು ಕೋಮುವಾದಿ ಅಹವಾಲನ್ನು ಅಂಗೀಕರಿಸಿರುವುದು ದುರದೃಷ್ಟಕರವಾಗಿದೆ. ದೇಶಾದ್ಯಂತ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಧರ್ಮಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಅಲಿಗಡ ಮುಸ್ಲಿಮ್ ವಿವಿಯಲ್ಲಿ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಹಲವಾರು ಹಿಂದು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದಕ್ಕೆ ಯಾರೂ ಎಂದಿಗೂ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಎನ್ಸಿ ವಕ್ತಾರ ನಬಿ ದಾರ್ ಹೇಳಿದರು.
ಬಿಜೆಪಿಯು ಸಂಸ್ಥೆಗಳಲ್ಲಿ ಕೋಮುವಾದವನ್ನು ಬೆಳೆಸುತ್ತಿದೆ ಮತ್ತು ಸಮಾಜವನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದ ಎನ್ಸಿ ಶಾಸಕ ತನ್ವೀರ್ ಸಾದಿಕ್ ಅವರು,ಆಸ್ಪತ್ರೆಗಳು, ಶಾಲೆಗಳು,ವಿವಿಗಳು ಮತ್ತು ವೈದ್ಯಕೀಯ ಕಾಲೇಜುಗಳು ಧರ್ಮದ ಆಧಾರದಲ್ಲಿ ಪ್ರವೇಶವನ್ನು ನಿರ್ಧರಿಸಲು ಆರಂಭಿಸಿದರೆ ನಾವು ಯಾವ ರೀತಿಯ ದೇಶವಾಗುತ್ತೇವೆ? ನಾಳೆ ರೋಗಿಗಳಿಗೆ ಅವರ ಧರ್ಮದ ಪ್ರಕಾರ ಚಿಕಿತ್ಸೆ ನೀಡಲಾಗುತ್ತದೆಯೇ? ಬಹುಸಂಖ್ಯಾತರ ಬೇಡಿಕೆಗಳನ್ನು ಈಡೇರಿಸಲು ಅರ್ಹತೆಯನ್ನು ಕಡೆಗಣಿಸಲಾಗುತ್ತದೆಯೇ? ಇದು ಭವಿಷ್ಯದಲ್ಲಿ ಖಂಡಿತವಾಗಿಯೂ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಹೇಳಿದರು.
ಬಿಜೆಪಿಯ ನಡೆಯನ್ನು ‘ನಾಚಿಕೆಗೇಡು’ ಎಂದು ಬಣ್ಣಿಸಿದ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು, ನಯಾ ಕಾಶ್ಮೀರದಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯ ಈಗ ಶಿಕ್ಷಣಕ್ಕೂ ವಿಸ್ತರಿಸುತ್ತಿದೆ. ವಿಪರ್ಯಾಸವೆಂದರೆ ಭಾರತದ ಏಕೈಕ ಮುಸ್ಲಿಮ್ ಬಹುಸಂಖ್ಯಾತ ಹಾಗೂ ದೇಶದ ಏಕೈಕ ಮುಸ್ಲಿಮ್ ಮುಖ್ಯಮಂತ್ರಿಯನ್ನು ಹೊಂದಿರುವ ರಾಜ್ಯದಲ್ಲಿ ಈ ಮುಸ್ಲಿಮ್ ವಿರೋಧಿ ನೀತಿಯನ್ನು ಕಾನೂನು ಬದ್ಧಗೊಳಿಸಲಾಗುತ್ತಿದೆ ಎಂದು ಹೇಳಿದರು.
ಜಮ್ಮುಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ನ ಅಧ್ಯಕ್ಷ ಸಜ್ಜಾದ್ ಲೋನೆ ಮತ್ತು ಜಮ್ಮುಕಾಶ್ಮೀರ ಅಪ್ನಿ ಪಾರ್ಟಿ ಅಧ್ಯಕ್ಷ ಅಲ್ತಾಫ್ ಬುಖಾರಿ ಅವರೂ ಬಿಜೆಪಿಯ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.







