ಬಿಹಾರ ರಾಜಕೀಯ ಬಿಕ್ಕಟ್ಟು: ನಿತೀಶ್ ಕುಮಾರ್ ಮುಂದಿನ ನಡೆ ಕುರಿತು ಎಲ್ಲರ ಚಿತ್ತ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (PTI)
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಾವು 2022ರಲ್ಲಿ ಕೈಬಿಟ್ಟ ಬಿಜೆಪಿ ಜೊತೆ ಮತ್ತೆ ನಂಟು ಜೋಡಿಸಿ ಬಿಜೆಪಿ ಸಹಕಾರದೊಂದಿಗೆ ಸಿಎಂ ಆಗಲಿದ್ದಾರೆಂಬ ಸುದ್ದಿ ಬಿಹಾರ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಅತ್ತ ನಿತೀಶ್ ಮತ್ತೆ ಬಿಜೆಪಿ ಜೊತೆ ಮೈತ್ರಿ ಸಾಧಿಸಿದ್ದೇ ಆದಲ್ಲಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ಬೀಳಲಿದೆ.
► ನಿತೀಶ್ ಕುಮಾರ್ ಅವರು ಬಿಜೆಪಿ, ಕಾಂಗ್ರೆಸ್ ಮತ್ತು/ಅಥವಾ ಲಾಲು ಯಾದವ್ ಅವರ ರಾಷ್ಟ್ರೀಯ ಜನತದ ದಳದೊಂದಿಗೆ 2013ರಿಂದ ಒಂದಲ್ಲ ಒಂದು ಬಾರಿ ಮೈತ್ರಿ ಸಾಧಿಸಿ ನಂತರ ಕೈಬಿಡುವ ಪರಿಪಾಠ ಹೊಂದಿದ್ದರಿಂದ ಅವರು “ಪಲ್ಟು ರಾಮ್” ಎಂಬ ಅಡ್ಡ ಹೆಸರನ್ನು ಪಡೆದುಕೊಂಡಿದ್ದಾರೆ. 2022ರಲ್ಲಿ ಎನ್ಡಿಎ ಕೂಟದಿಂದ ಹೊರಬಿದ್ದ ಅವರು ವಿಪಕ್ಷಗಳ ಜೊತೆ ಮೈತ್ರಿ ಸಾಧಿಸಿದ್ದರು.
►ಇತ್ತೀಚೆಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕುರ್ ಅವರಿಗೆ ಕೇಂದ್ರ ಸರ್ಕಾರ ಘೋಷಿಸಿದ ನಂತರ ಬಿಹಾರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು.
►ನಿತೀಶ್ ಕುಮಾರ್ ಅವರು ಶುಕ್ರವಾರ ಗಣರಾಜ್ಯೋತ್ಸವದಂದು ಬಿಹಾರ ರಾಜ್ಯಪಾಲರ ನಿವಾಸಕ್ಕೆ ತೆರಳಿದ್ದರೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಜೊತೆಗಿರದೇ ಇದ್ದಿದ್ದು ಎರಡೂ ಪಕ್ಷಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.
► ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರ ಹೇಳಿಕೆಯೂ ಮತ್ತಷ್ಟು ಊಹಾಪೋಹಕ್ಕೆ ಕಾರಣವಾಗಿತ್ತು. “ರಾಜಕೀಯದಲ್ಲಿ ಯಾವ ಬಾಗಿಲು ಕೂಡ ಮುಚ್ಚಿರುವುದಿಲ್ಲ. ಅಗತ್ಯವಿದ್ದರೆ ಬಾಗಿಲು ತೆರೆಯಬಹುದು,” ಎಂದು ಸುಶೀಲ್ ಕುಮಾರ್ ಮೋದಿ ಹೇಳಿದ್ದರು.
►ಈ ಬೆಳವಣಿಗೆಗೆ ಜನವರಿ 13ರ ಇಂಡಿಯಾ ಮೈತ್ರಿಕೂಟದ ಸಭೆ ಕಾರಣ ಎನ್ನಲಾಗಿದೆ. ಸಭೆಯಲ್ಲಿ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರು ಇಂಡಿಯಾ ಮೈತ್ರಿಕೂಟದ ಸಂಚಾಲಕ ಹುದ್ದೆಗೆ ನಿತೀಶ್ ಹೆಸರು ಪ್ರಸ್ತಾಪಿಸಿದ್ದರು. ಇದಕ್ಕೆ ಶರದ್ ಪವಾರ್. ಲಾಲು ಯಾದವ್ ಸಹಿತ ಎಲ್ಲಾ ನಾಯಕರೂ ಒಪ್ಪಿದ್ದರು. ಆದರೆ ರಾಹುಲ್ ಗಾಂಧಿ ಮಧ್ಯಪ್ರವೇಶಿಸಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿರ್ಧಾರ ತಿಳಿದು ಈ ಕುರಿತು ಮುಂದಡಿಯಿಡುವ ಬಗ್ಗೆ ಮಾತನಾಡಿದ್ದರು.
►ಬಿಹಾರ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದಾಗ ನಿತೀಶ್ ಇಂಡಿಯಾ ಮೈತ್ರಿ ಕೂಟಕ್ಕೆ ವಿದಾಯ ಹೇಳಬಹುದೆಂದೇ ತಿಳಿಯಬಹುದಾಗಿದೆ.
►ಬಿಹಾರ ಸರ್ಕಾರ ಶುಕ್ರವಾರ 79 ಐಪಿಎಸ್ ಅಧಿಕಾರಿಗಳು ಮತ್ತು 45 ಬಿಹಾರ ಆಡಳಿತಾತ್ಮಕ ಸೇವೆ ಅಧಿಕಾರಿಗಳನ್ನು ವರ್ಗಾಯಿಸಿದೆ.
►ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಬಿಜೆಪಿ ಸಭೆಯನ್ನೂ ಆಯೋಜಿಸಿದೆ.
► ಈ ಬಿಕ್ಕಟ್ಟಿನ ನಡುವೆ ಕಾಂಗ್ರೆಸ್ ಮತ್ತು ಆರ್ಜೆಡಿ ತಮ್ಮ ಶಾಸಕರ ಸಭೆ ಕರೆದಿವೆ. ಈ ರಾಜಕೀಯ ಬೆಳವಣಿಗೆಗೂ ಸಭೆಗೂ ನಂಟು ಇಲ್ಲ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಚರ್ಚಿಸಲು ಸಭೆ ಕರೆದಿರುವುದಾಗಿ ಕಾಂಗ್ರೆಸ್ ಹೇಳಿದೆ.
►ನಿತೀಶ್ ಕುಮಾರ್ ಅವರು ತಮ್ಮ ಪಕ್ಷದ ಶಾಸಕಾಂಗ ಸಭೆಯನ್ನು ರವಿವಾರ 10 ಗಂಟೆಗೆ ಕರೆದಿದ್ದಾರೆ. ಆಗ ಅವರು ಬಿಜೆಪಿ ಜೊತೆ ನಂಟು ಕುರಿತು ಘೋಷಿಸಿ ಬಿಜೆಪಿ ಬೆಂಬಲದ ಸರ್ಕಾರದ ಸೀಎಂ ಆಗಲು ಸರ್ಕಾರ ರಚನೆಗೆ ಹಕ್ಕು ಸ್ಥಾಪಿಸುವ ಬಗ್ಗೆ ನಿರ್ಧರಿಸಬಹುದೆಂದು ತಿಳಿಯಲಾಗಿದೆ.







