ಧುರಂಧರ್ ಚಿತ್ರದ ವೀಡಿಯೊದಲ್ಲಿ ಅಕ್ಷಯ್ ಖನ್ನಾಗೆ ಹೋಲಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ವಿಲನ್ ಮಾಡಿದ ಬಿಜೆಪಿ!

ಹೊಸದಿಲ್ಲಿ, ಡಿ.8: ಸಂಸತ್ತಿನಲ್ಲಿ ನಡೆದ 'ವಂದೇ ಮಾತರಂ' ಚರ್ಚೆಯ ಕುರಿತ ಮೀಮ್ ಸೃಷ್ಟಿಸಿ ಬಿಜೆಪಿ ಶೇರ್ ಮಾಡಿದ್ದ ಧುರಂಧರ್ ಚಿತ್ರದ ವೀಡಿಯೊ ಇದೀಗ ಪಕ್ಷಕ್ಕೆ ಮುಜುಗರ ತಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಟ ಅಕ್ಷಯ್ ಖನ್ನಾ ರೂಪದಲ್ಲಿ ತೋರಿಸಲಾಗಿದೆ. ಖನ್ನಾ ಮೂಲ ಚಿತ್ರದಲ್ಲಿ ಭಾರತವನ್ನು ನಾಶಮಾಡಲು ಯತ್ನಿಸುವ ಖಳನಾಯಕನ ಪಾತ್ರ ನಿರ್ವಹಿಸಿದ್ದ ವಿಚಾರ ಬೆಳಕಿಗೆ ಬಂದ ನಂತರ ತಕ್ಷಣ ಪೋಸ್ಟ್ ಡಿಲೀಟ್ ಮಾಡಲಾಗಿದೆ.
“ಧುರಂಧರ್ ಕವಿತೆ ಹೈ ‘ವಂದೇ ಮಾತರಂ’! ಏನು ಹೇಳುತ್ತೀರಿ ಹುಡುಗರೇ? ಪ್ರಧಾನಮಂತ್ರಿ ಮೋದಿ ವಂದೇ ಮಾತರಂ ಚರ್ಚೆಯಲ್ಲಿ ಕಾಂಗ್ರೆಸ್ ನಡೆಯನ್ನು ಬಹಿರಂಗಪಡಿಸಿದ್ದಾರೆ ಎಂದು ರಾಜಕೀಯ ವ್ಯಂಗ್ಯದ ಧಾಟಿಯಲ್ಲಿ ಹಾಕಿದ್ದ ವೀಡಿಯೊ ಕ್ಲಿಪ್ ಗಂಟೆಗಳಲ್ಲೇ ವೈರಲ್ ಆಗಿತ್ತು. ಬಳಿಕ ನೈಜತೆ ತಿಳಿದು ಸಾಮಾಜಿಕ ಜಾಲತಾಣದಲ್ಲಿ ಚಿತ್ರವೇ ಬದಲಾಯಿತು.
ವೀಡಿಯೊದಲ್ಲಿ ಮೋದಿ ಅವರ ಮುಖವನ್ನು ವಿಲನ್ ಪಾತ್ರಕ್ಕೆ ಜೋಡಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ “ಬಿಜೆಪಿಯೇ ಮೋದಿ ಅವರನ್ನು ವಿಲನ್ ಪಾತ್ರಕ್ಕೆ ಹೊಂದಿಸಿದ ಉದಾಹರಣೆ ಇದು” ಎಂದು ಬಳಕೆದಾರರು ವ್ಯಂಗ್ಯವಾಡಿದ್ದಾರೆ.
ವಿವಾದ ಜೋರಾಗುತ್ತಿದ್ದಂತೆಯೇ ಬಿಜೆಪಿ ಮೌನವಾಗಿ ವೀಡಿಯೊವನ್ನು ಅಳಿಸಿದ್ದು, ಅದರ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಈ ನಡೆ ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದ್ದು, “@BJP4India ಏಕೆ ಪೋಸ್ಟ್ ಅಳಿಸಲಾಗಿದೆ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.







