ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ ವೆಚ್ಚ ಭರಿಸದ ಬಿಜೆಪಿ; 25 ಲಕ್ಷ ರೂ. ಬಾಕಿ

File Photo (Credit: bhaskarenglish.in)
ಅಹಮದಾಬಾದ್: ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತಪಟ್ಟು ಮೂರು ತಿಂಗಳಾದರೂ, ಅವರ ಅಂತ್ಯಕ್ರಿಯೆ ಮತ್ತು ಸ್ಮಾರಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವೆಚ್ಚವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಭರಿಸಿಲ್ಲ ಎಂಬ ವರದಿ ಸದ್ಯ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ ಎಂದು bhaskarenglish.in ವರದಿ ಮಾಡಿದೆ.
ಹೂವಿನ ಅಲಂಕಾರ, ಮೆರವಣಿಗೆ, ಶಾಮಿಯಾನ ಮತ್ತು ಇತರೆ ಸರಕು ಸಂಜಾಮುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಸೇವಾ ವೆಚ್ಚ ಪಾವತಿ ಬಾಕಿಯಿರುವುದು ಕುಟುಂಬ ಹಾಗೂ ಸೇವೆ ಪೂರೈಸಿದ ವ್ಯಾಪಾರಿಗಳಿಗೆ ಆರ್ಥಿಕವಾಗಿ ಹೊರೆಯಾಗಿಸಿದೆ.
ಜೂನ್ 12, 2025 ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ವಿಜಯ್ ರೂಪಾನಿ ಮೃತಪಟ್ಟಿದ್ದರು. ಡಿಎನ್ಎ ಪರೀಕ್ಷೆಯ ಮೂಲಕ ದೇಹವನ್ನು ಗುರುತಿಸಿ, ಜೂನ್ 16 ರಂದು ರಾಜ್ ಕೋಟ್ನಲ್ಲಿ ರಾಜ್ಯ ಗೌರವದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿಸಲಾಗಿತ್ತು.
ರಾಜ್ಕೋಟ್ ನಗರದೆಲ್ಲೆಡೆ ಬ್ಯಾನರ್, ಪೋಸ್ಟರ್ಗಳು, ಹೂವಿನ ಅಲಂಕಾರಗಳು ಮತ್ತು ಮೆರವಣಿಗೆಯನ್ನು ಭವ್ಯವಾಗಿ ಆಯೋಜಿಸಲಾಗಿತ್ತು. ಸರ್ಕಾರವು ಗೌರವ ರಕ್ಷಣೆಯನ್ನು ಒದಗಿಸಿತ್ತು, ಆದರೆ ಅಂತ್ಯಕ್ರಿಯೆಗೆ ಸಂಬಂಧಿಸಿದ ಇತರೆ ವೆಚ್ಚಗಳನ್ನು ಬಿಜೆಪಿ ಭರಿಸುವ ಬಗ್ಗೆ ಸ್ಪಷ್ಟ ನಿಲುವನ್ನು ತೋರಿಲ್ಲ ಎಂದು ತಿಳಿದು ಬಂದಿದೆ.
Bhaskar English ವರದಿ ಪ್ರಕಾರ, ಕುಟುಂಬದ ಆಪ್ತ ಮೂಲಗಳು ಹೇಳುವಂತೆ, ವ್ಯಾಪಾರಿಗಳು ಜುಲೈ ತಿಂಗಳಲ್ಲಿ ಬಾಕಿ ಪಾವತಿಗಾಗಿ ಮನೆಗೆ ಭೇಟಿ ನೀಡಿದಾಗಲೇ ಈ ವೆಚ್ಚದ ಪಾವತಿ ಬಾಕಿಯಿರುವುದು ಅವರ ಗಮನಕ್ಕೆ ಬಂದಿದೆ. ಈ ಕುರಿತಂತೆ ಪಕ್ಷವು ಕುಟುಂಬದೊಂದಿಗೆ ಯಾವುದೇ ಮಾತುಕತೆ ಮಾಡಿರಲಿಲ್ಲ ಎನ್ನಲಾಗಿದೆ.
ರೂಪಾನಿ ಕುಟುಂಬವು ಕೆಲವು ವ್ಯಾಪಾರಿಗಳಿಗೆ ಭಾಗಶಃ ಖರ್ಚು ವೆಚ್ಚಗಳನ್ನು ಪಾವತಿಸಿದ್ದಾರೆ. ಆದರೆ ಇನ್ನೂ ಹಲವಾರು ವ್ಯಾಪಾರಿಗಳು 20–25 ಲಕ್ಷ ರೂ. ಬಾಕಿ ಪಾವತಿಗಾಗಿ ಕಾಯುತ್ತಿದ್ದಾರೆ. ಇದರ ಪರಿಣಾಮವಾಗಿ ವ್ಯಾಪಾರಿಗಳು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ.
ಈ ಕುರಿತಂತೆ ಸೌರಾಷ್ಟ್ರದ ಇಬ್ಬರು ಹಿರಿಯ ನಾಯಕರನ್ನು ಮಧ್ಯಪ್ರವೇಶಿಸಲು ಸಂಪರ್ಕಿಸಿದರೂ, ಅವರು ಅದಕ್ಕೆ ನಿರಾಕರಿಸಿದ್ದಾರೆ. ಇದರಿಂದ ಗುಜರಾತ್ ಬಿಜೆಪಿ ಘಟಕದೊಳಗಿನ ಆಂತರಿಕ ಘರ್ಷಣೆ ಬಹಿರಂಗವಾಗಿದೆ.
ಮಾಜಿ ಮುಖ್ಯಮಂತ್ರಿಯಂತಹ ಪ್ರಭಾವಶಾಲಿ ನಾಯಕರ ಅಂತ್ಯಕ್ರಿಯೆ ವೆಚ್ಚವನ್ನು ಬಿಜೆಪಿ ಪಕ್ಷ ವಹಿಸದಿರುವುದು, ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.







