ಉತ್ತರ ಪ್ರದೇಶ: ಕಾರು ಚಾಲಕನನ್ನು ಬಲವಂತವಾಗಿ ಮಂಡಿಯೂರಿಸಿ ನಿಂದಿಸಿದ ಬಿಜೆಪಿ ನಾಯಕನ ಬಂಧನ

Screengrab:X/@yadavakhilesh
ಮೀರತ್: ವಾಹನ ನಿಲುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವೊಂದರಲ್ಲಿ, ಇಬ್ಬರು ಯುವಕರೊಂದಿಗೆ ಬಿಜೆಪಿ ನಾಯಕನೊಬ್ಬ ಅನುಚಿತ ವರ್ತನೆ ತೋರಿದ್ದು, ಈ ಪೈಕಿ ಬಲವಂತವಾಗಿ ಓರ್ವ ಯುವಕನಿಗೆ ತನ್ನ ಮೂಗಿನಿಂದ ನೆಲವನ್ನು ಒರೆಸುವಂತೆ ಮಾಡಿರುವ ಘಟನೆ ಮೀರತ್ ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತ ಬಿಜೆಪಿ ನಾಯಕನನ್ನು ಚಪ್ರಾನ ಎಂದು ಗುರುತಿಸಲಾಗಿದೆ.
ಈ ಘಟನೆ ಅಕ್ಟೋಬರ್ 19ರ ರಾತ್ರಿಯಂದು ಮೀರತ್ ನ ತೇಜ್ ಗಾರ್ಹಿ ಪ್ರದೇಶದ ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಬಿಜೆಪಿಯ ಕಿಸಾನ್ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವಿಕುಲ್ ಚಪ್ರಾನ ಹಾಗೂ ಆತನ ಸಹಚರರು ಇಬ್ಬರು ಯುವಕರಿಗೆ ಬೆದರಿಕೆ ಒಡ್ಡುತ್ತಿರುವುದು ಹಾಗೂ ಅವರ ಕಾರಿನ ಕಿಟಕಿಯನ್ನು ಒಡೆದು ಹಾಕುತ್ತಿರುವುದು ಸೆರೆಯಾಗಿದೆ. ಈ ವೇಳೆ ಓರ್ವ ಯುವಕ ಕೈಮುಗಿದು ಕ್ಷಮೆ ಯಾಚಿಸುತ್ತಿರುವುದು ಹಾಗೂ ಆತ ಮಂಡಿಯೂರಿ ತನ್ನ ಮೂಗಿನಿಂದ ನೆಲ ಒರೆಸುತ್ತಿರುವುದೂ ಕಂಡು ಬಂದಿದ್ದು, ಮತ್ತೊಬ್ಬ ವ್ಯಕ್ತಿ ಆತನನ್ನು ನಿಂದಿಸುತ್ತಿರುವುದು ಆ ವಿಡಿಯೊದಲ್ಲಿ ದಾಖಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಉತ್ತರ ಪ್ರದೇಶದ ಇಂಧನ ಖಾತೆಯ ರಾಜ್ಯ ಸಚಿವರ ಕಚೇರಿಯ ಕೆಳಗೆ ಪಾರ್ಕಿಂಗ್ ವಿಚಾರದಲ್ಲಿ ನಡೆದ ವಾಗ್ವಾದದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಂ ಸಿಂಗ್, “ವೈರಲ್ ವಿಡಿಯೊವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಬ್ಬರು ವ್ಯಕ್ತಿಗಳ ನಡುವಿನ ವಾಹನ ನಿಲುಗಡೆ ವಿಚಾರದಲ್ಲಿ ನಡೆದ ವಾಗ್ವಾದದಿಂದ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಚಪ್ರಾನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಘಟನೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, “ಬಿಜೆಪಿಯವರು ಅಧಿಕಾರದ ಮದವೇರಿಸಿಕೊಂಡಿದ್ದು, ಯಾರನ್ನು ಅವಮಾನಿಸಲೂ ಅವರು ಹಿಂಜರಿಯುವುದಿಲ್ಲ. ಆದರೆ, ಒಂದಲ್ಲ ಒಂದು ದಿನ ಎಲ್ಲ ದುರಹಂಕಾರ ಅಂತ್ಯಗೊಳ್ಳಲಿದೆ ಎಂಬುದನ್ನು ಬಿಜೆಪಿಯವರು ಮರೆಯಬಾರದು” ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚಾಟಿ ಬೀಸಿದ್ದಾರೆ.
भाजपाई सत्ता के अहंकार में चूर होकर किसी को भी अपमानित करने से नहीं चूकते हैं।
— Akhilesh Yadav (@yadavakhilesh) October 21, 2025
भाजपाई न भूलें, एक न एक दिन हर दंभ का अंत होता है। pic.twitter.com/fW6ZVOLeQB







