Madhya Pradesh | ಅತ್ಯಾಚಾರ ಸಂತ್ರಸ್ತೆಗೆ BJP ನಾಯಕ ಬೆದರಿಕೆಯೊಡ್ಡುತ್ತಿರುವ ವಿಡಿಯೊ ವೈರಲ್: ನನಗೇನೂ ಆಗುವುದಿಲ್ಲ ಎಂದ ಆರೋಪಿ

screengrab : X
ಸತ್ನಾ (ಮಧ್ಯಪ್ರದೇಶ): ಬಿಜೆಪಿ ನಾಯಕನೊಬ್ಬ ಅತ್ಯಾಚಾರ ಸಂತ್ರಸ್ತೆಗೆ ಚಾಕು ತೋರಿಸಿ ಹಾಗೂ ಆಕ್ಷೇಪಾರ್ಹ ವಿಡಿಯೊವೊಂದನ್ನು ಮಾಡಿ ಬೆದರಿಕೆ ಒಡ್ಡಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರಾಮ್ಪುರ್ ಬಘೇಲನ್ ಗ್ರಾಮದಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೊ ವೈರಲ್ ಆಗಿದೆ. ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿ, ತನ್ನೊಂದಿಗೆ ಮತ್ತೊಮ್ಮೆ ದೈಹಿಕ ಸಂಪರ್ಕ ಬೆಳೆಸುವಂತೆ ಬಿಜೆಪಿ ನಾಯಕ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ್ದಾರೆ.
रेप पीड़िता गिड़गिड़ा कर कह रही है- 'मैं सोशल मीडिया में वीडियो डाल दूंगी'
— Ranvijay Singh (@ranvijaylive) December 27, 2025
BJP नेता अशोक सिंह ने कहा- 'उससे मेरा कुछ नहीं होगा, मुझे कोई डर नहीं है'
वीडियो में जो आदमी दिख रहा है, ये BJP नेता अशोक सिंह है.
इसपर आरोप है कि इसने चाकू की नोक पर रेप किया और वीडियो बना लिया.
अब… pic.twitter.com/iuvRASrLAf
ಆರೋಪಿ ಬಿಜೆಪಿ ನಾಯಕ ತನಗೆ ಬೆದರಿಕೆ ಒಡ್ಡಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ ಬೆನ್ನಿಗೇ, ಆತ ಬೆದರಿಕೆ ಒಡ್ಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಘಟನೆಯ ವಿಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆರೋಪಿಯು ಪೊಲೀಸ್ ಅಧಿಕಾರಿಯೊಬ್ಬರನ್ನು ನಿಂದಿಸುತ್ತಾ, “ನನಗೇನಾಗುತ್ತದೆ? ನನಗೇನೂ ಆಗುವುದಿಲ್ಲ. ನೀನು ಎಲ್ಲಿ ಬೇಕಾದರೂ ದೂರು ನೀಡು. ನನಗೇನೂ ಆಗುವುದಿಲ್ಲ” ಎಂದು ಬೆದರಿಕೆ ಒಡ್ಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ, ಅತ್ಯಾಚಾರ ಸಂತ್ರಸ್ತೆಯು ಅಳುತ್ತಾ, ನಾನು ದೂರು ನೀಡುತ್ತೇನೆ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಈ ಸಂಬಂಧ ಅತ್ಯಾಚಾರ ಸಂತ್ರಸ್ತೆಯು ಡಿ. 22ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖೆ ಕಳೆದ ಐದು ದಿನಗಳಿಂದ ನಡೆಯುತ್ತಿದ್ದು, ಸಂತ್ರಸ್ತೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಈ ಘಟನೆ ಬೆಳಕಿಗೆ ಬಂದಿದೆ.
ಅತ್ಯಾಚಾರ ಸಂತ್ರಸ್ತೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನ್ಸ್ ರಾಜ್ ಸಿಂಗ್ ಗೆ ಲಿಖಿತ ದೂರು ನೀಡಿದ್ದು, ಆರು ತಿಂಗಳ ಹಿಂದೆ ಕರ್ಹಿ (ಹನುಮಾನ್ ಗಂಜ್) ನಿವಾಸಿ ಆರೋಪಿ ಅಶೋಕ್ ಸಿಂಗ್ ನನ್ನ ಮನೆಯನ್ನು ಪ್ರವೇಶಿಸಿದ್ದ ಎಂದು ಆರೋಪಿಸಿದ್ದಾರೆ.
ಆತ ನನಗೆ ಚಾಕು ತೋರಿಸಿ ಬೆದರಿಸಿ ನನ್ನ ಮೇಲೆ ಅತ್ಯಾಚಾರವೆಸಗಿದ್ದು, ಆ ಆಕ್ಷೇಪಾರ್ಹ ಸ್ಥಿತಿಯ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾನೆ. ನಾನು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ನನ್ನನ್ನು ಕೊಲೆ ಮಾಡುವುದಾಗಿ ಆತ ನನಗೆ ಬೆದರಿಕೆ ಒಡ್ಡಿದ್ದಾನೆ. ಹೀಗಾಗಿಯೇ ನಾನು ಮೌನಕ್ಕೆ ಜಾರಿದೆ ಎಂದು ಅತ್ಯಾಚಾರ ಸಂತ್ರಸ್ತೆಯು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ತ್ರಿವೇದಿಗೆ ಪೊಲೀಸ್ ವರಿಷ್ಠಾಧಿಕಾರಿ ಹನ್ಸ್ ರಾಜ್ ಸಿಂಗ್ ಹಸ್ತಾಂತರಿಸಿದ್ದಾರೆ. ಈ ವಿಷಯದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ತಿವಾರಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಾಮರ್ಶೆ ನಡೆಸಿದ ನಂತರವಷ್ಟೇ ನಾನು ಯಾವುದೇ ಬಗೆಯ ವಿಸ್ತೃತ ಮಾಹಿತಿಯನ್ನು ನೀಡಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







