ಬಿಹಾರ: ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ ಬೆನ್ನಲ್ಲೇ ಬಿಜೆಪಿ ನಾಯಕನ ಗುಂಡಿಕ್ಕಿ ಕೊಲೆ
ಒಂದೇ ವಾರದ ಅಂತರದಲ್ಲಿ ಮೂರನೆಯ ಪ್ರಕರಣ

ಸುರೇಂದ್ರ ಕೇವತ್ (Photo credit: NDTV)
ಪಟ್ನಾ: ಖ್ಯಾತ ಉದ್ಯಮಿ ಗೋಪಾಲ್ ಖೇಮ್ಕಾರನ್ನು ಅವರ ನಿವಾಸದ ಬಳಿಯೇ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದ ಕೇವಲ ಒಂದು ವಾರದ ಅಂತರದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಶೇಖ್ ಪುರ ಬಳಿ ಬಿಜೆಪಿ ನಾಯಕ ಸುರೇಂದ್ರ ಕೇವತ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗದ್ದಾರೆ. ತಕ್ಷಣವೇ 52 ವರ್ಷದ ಸುರೇಂದ್ರ ಕೇವತ್ ರನ್ನು ಪಟ್ನಾ ಏಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಿದ ಶಾಸಕ ಗೋಪಾಲ್ ರವಿದಾಸ್ ಹಾಗೂ ಮಾಜಿ ಸಚಿವ ಶ್ಯಾಮ್ ರಜಾಕ್, ಕೇವತ್ ರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಬಳಿಕ, ಔಪಚಾರಿಕ ವಿಧಾನಗಳನ್ನು ಆದಷ್ಟೂ ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಿದರು.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡಗಳನ್ನು ಕರೆಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಕನ್ಹಯ್ಯ ಸಿಂಗ್, “ಸುರೇಂದ್ರ ಕೇವತ್ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅವರನ್ನು ಕೂಡಲೇ ಏಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಯ ವೇಳೆ ಅವರು ಮೃತಪಟ್ಟರು. ನಾವು ಅವರ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಅದರಂತೆ ಕ್ರಮ ಕೈಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಕಳೆದ ಒಂದು ವಾರದ ಅವಧಿಯಲ್ಲಿ ಬಿಹಾರದ ರಾಜಧಾನಿ ಪಟ್ನಾದಲ್ಲೇ ನಡೆದಿರುವ ಮೂರನೆಯ ಹತ್ಯೆ ಇದಾಗಿದೆ. ಒಂದು ವಾರದ ಹಿಂದೆ ಖ್ಯಾತ ಉದ್ಯಮಿ ಗೋಪಾಲ್ ಖೇಮ್ಕಾರನ್ನು ಅವರ ನಿವಾಸದೆದುರೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದು, ಪರಾರಿಯಾಗಿದ್ದರು. ಬಳಿಕ, ಶುಕ್ರವಾರ ಸಂಜೆ ಪಟ್ನಾದ ರಾಮಕೃಷ್ಣನಗರ ಪ್ರದೇಶದಲ್ಲಿ ಮತ್ತೊಬ್ಬ ಉದ್ಯಮಿ ವಿಕ್ರಂ ಝಾರನ್ನೂ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. ಇದೀಗ, ಬಿಜೆಪಿ ನಾಯಕ ಸುರೇಂದ್ರ ಕೇವತ್ ರನ್ನೂ ಗುಂಡಿಟ್ಟು ಹತ್ಯೆಗೈಯ್ಯಲಾಗಿದ್ದು, ಬಿಹಾರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗತೊಡಗಿವೆ.
ಬಿಹಾರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೆಣಗಾಡುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳು ಮುಗಿಬಿದ್ದಿವೆ.







