ಮಧ್ಯಪ್ರದೇಶ | ರಾಷ್ಟ್ರೀಯ ಹೆದ್ದಾರಿ ಮಧ್ಯೆಯೇ ಮಹಿಳೆಯೊಂದಿಗೆ ಬಿಜೆಪಿ ನಾಯಕನ ಆಕ್ಷೇಪಾರ್ಹ ಕೃತ್ಯ: ವೀಡಿಯೊ ವೈರಲ್
ವೀಡಿಯೊ ವೈರಲ್ ಆಗುತ್ತಿದ್ದಂತೆ ಅವರು ನಮ್ಮ ಸದಸ್ಯರಲ್ಲ ಎಂದ ಬಿಜೆಪಿ

ಭೋಪಾಲ್: ಮಧ್ಯಪ್ರದೇಶದ ಮಂಡ್ಸೌರ್ ನ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ನಾಯಕ ಮನೋಹರ್ ಲಾಲ್ ಧಾಕಡ್ ರಾಷ್ಟೀಯ ಹೆದ್ದಾರಿಯಲ್ಲಿ ಕಾರಿನಿಂದಿಳಿದು ಮಹಿಳೆಯೊಂದಿಗೆ ಆಕ್ಷೇಪಾರ್ಹ ಕೃತ್ಯ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೆದ್ದಾರಿ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಮೇ 13 ರಂದು ಈ ವೀಡಿಯೊ ಸೆರೆಯಾಗಿದೆ.
ಮಂಡ್ಸೌರ್ ಜಿಲ್ಲೆಯ ಬನಿ ಗ್ರಾಮದ ನಿವಾಸಿಯಾಗಿರುವ ಮನೋಹರ್ ಲಾಲ್ ಧಾಕಡ್, ನೂತನವಾಗಿ ನಿರ್ಮಿಸಲಾದ 8 ಪಥದ ಹೆದ್ದಾರಿಯಲ್ಲಿ ಆಕ್ಷೇಪಾರ್ಹ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಮಹಿಳೆಯೊಂದಿಗೆ ಆಕ್ಷೇಪಾರ್ಹ ದೃಶ್ಯಗಳಲ್ಲಿ ಸುಮಾರು ಮೂರೂವರೆ ನಿಮಿಷಗಳ ಕಾಲ ಅವರು ಕೃತ್ಯ ಎಸಗಿರುವುದು ಸೆರೆಯಾಗಿದೆ.
ಅವರ ಪತ್ನಿಯೂ ಕೂಡ ಮಂಡ್ಸೌರ್ ಜಿಲ್ಲಾ ಪಂಚಾಯತ್ ಸದಸ್ಯರು ಎಂದು ತಿಳಿದು ಬಂದಿದೆ.
ವೀಡಿಯೊ ವೈರಲಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಮಂಡ್ಸೌರ್ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ್ ದೀಕ್ಷಿತ್ ಯಾವುದೇ ಕ್ರಮ ಕೈಗೊಳ್ಳುವ ಮೊದಲು ತನಿಖೆ ನಡೆಸಲಾಗುವುದು. ಧಾಕಡ್ ಅವರು ಬಿಜೆಪಿ ಪದಾಧಿಕಾರಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಬಿಜೆಪಿ ವಕ್ತಾರ ಯಶ್ಪಾಲ್ ಸಿಂಗ್ ಸಿಸೋಡಿಯಾ ಅವರು ಪಕ್ಷವು ಆರೋಪವನ್ನು ಗಣನೆಗೆ ತೆಗೆದುಕೊಂಡು, ಪರಿಶೀಲಿಸಿ ಈ ಬಗ್ಗೆ ಕಟ್ಟುನಿಟ್ಟಿನ ಶಿಸ್ತನ್ನು ತೆಗೆದುಕೊಳ್ಳಲಿದೆ ಎಂದು ಒತ್ತಿ ಹೇಳಿದರು. ಧಾಕಡ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯರಲ್ಲ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ವಿ.ಡಿ. ಶರ್ಮಾ ಅವರೂ ಹೇಳಿದ್ದಾರೆ.
ವೈರಲ್ ವೀಡಿಯೊ ಕುರಿತು ಇಲ್ಲಿಯವರೆಗೆ ಅಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲ. ಪೊಲೀಸರು ವೀಡಿಯೊ ಚಿತ್ರೀಕರಣಗೊಂಡ ಸ್ಥಳವನ್ನು ಗುರುತಿಸುತ್ತಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಉಪ ಮಹಾನಿರೀಕ್ಷಕ ಮನೋಜ್ ಕುಮಾರ್ ಸಿಂಗ್ ಅವರು ಹೇಳಿದರು.
ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಚುನಾಯಿತ ಪ್ರತಿನಿಧಿಗಳ ನಡವಳಿಕೆ ಮತ್ತು ಜವಾಬ್ದಾರಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.







