ಘಾಝಿಪುರ್ ಹೆಸರನ್ನು ‘ಗೌತಮ್ ನಗರ್’ ಎಂದು ಮರುನಾಮಕರಣ ಮಾಡಬೇಕು: ಬಿಜೆಪಿ ಶಾಸಕಿ ಆಗ್ರಹ

ಕೇತಕೀ ಸಿಂಗ್ | PC ; Facebook
ಘಾಝಿಪುರ್: ಘಾಝಿಪುರ್ ಹೆಸರನ್ನು ಪೂಜ್ಯನೀಯ ಗೌತಮ್ ಮಹರ್ಷಿ ಹೆಸರಿನೊಂದಿಗೆ ಮರುನಾಮಕರಣ ಮಾಡಬೇಕು ಎಂದು ಬಸಿಂಧ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಕೇತಕೀ ಸಿಂಗ್ ಕರೆ ನೀಡಿದ್ದಾರೆ. ರಾಷ್ಟ್ರೀಯ ಅಸ್ಮಿತೆಯನ್ನು ಮರು ಸ್ಥಾಪಿಸಲು ಆಕ್ರಮಣಕಾರರ ಹೆಸರನ್ನು ಬದಲಿಸಿ, ಪ್ರಖ್ಯಾತ ಭಾರತೀಯ ವ್ಯಕ್ತಿಗಳ ಹೆಸರನ್ನು ಇಡಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇತಕೀ ಸಿಂಗ್, ನಾನು ಈಗಾಗಲೇ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದೇನೆ ಎಂದು ಹೇಳಿದ್ದಾರೆ. ಆಕ್ರಮಣಕಾರರರೊಂದಿಗೆ ಸಂಪರ್ಕ ಹೊಂದಿರುವ ಹೆಸರುಗಳನ್ನು ತೆಗೆದು ಹಾಕುವುದರಿಂದ, ಯುವ ಪೀಳಿಗೆ ಸ್ಫೂರ್ತಿಗೊಳ್ಳಲಿದ್ದು, ಅವರು ಭಾರತದ ಪರಂಪರೆಯೊಂದಿಗೆ ಮರು ಸಂಪರ್ಕ ಸಾಧಿಸಲು ನೆರವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ನಾವು ಆ ಅದ್ಭುತ ವ್ಯಕ್ತಿಯ ಜನ್ಮಸ್ಥಳವನ್ನು ಗೌರವಿಸಬೇಕಿದೆ. ಆಕ್ರಮಣಕಾರರನ್ನು ವೈಭವೀಕರಿಸುವ ಹೆಸರುಗಳನ್ನು ನಮ್ಮ ಇತಿಹಾಸವನ್ನು ಎತ್ತಿ ಹಿಡಿಯುವವರ ಹೆಸರುಗಳೊಂದಿಗೆ ಮರು ನಾಮಕರಣ ಮಾಡಬೇಕಿದೆ” ಎಂದು ಅವರು ಆಗ್ರಹಿಸಿದ್ದಾರೆ.
ಭಾರತೀಯ ಪರಂಪರೆಯ ಮಹಾನ್ ವ್ಯಕ್ತಿಯಾದ ಮಹರ್ಷಿ ಗೌತಮ್ ಈಗ ಘಾಝಿಪುರ್ ಎಂದು ಕರೆಯಲಾಗುತ್ತಿರುವ ಪ್ರಾಂತ್ಯದಲ್ಲಿ ಧ್ಯಾನ ಮಾಡಿದ್ದರು ಎಂದು ನಂಬಲಾಗಿದೆ.
1330ರಲ್ಲಿ ಸೈಯ್ಯದ್ ಮಸೂದ್ ಘಾಝಿ ಸ್ಥಾಪಿಸಿದ ಘಾಝಿಪುರ್ ಅನ್ನು ಸ್ಥಳೀಯ ಮಹರ್ಷಿಗಳ ಹೆಸರಿನೊಂದಿಗೆ ಮರುನಾಮಕರಣ ಮಾಡಿ, ಅವರಿಗೆ ಗೌರವ ಸಲ್ಲಿಸಬೇಕು ಎಂಬುದು ಶಾಸಕಿ ಕೇತಕೀ ಸಿಂಗ್ ಅವರ ಅಭಿಪ್ರಾಯವಾಗಿದೆ.







