ಬಿಜೆಪಿ ಸಂಸದ ದುಬೆ ವಿರುದ್ಧದ ಭ್ರಷ್ಟಾಚಾರ ಅರ್ಜಿಯನ್ನು ವಜಾಗೊಳಿಸಿದ ಲೋಕಪಾಲ್

ನಿಶಿಕಾಂತ್ ದುಬೆ | Photo Credit : PTI
ಹೊಸದಿಲ್ಲಿ, ಜ. 14: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆದಾಯ ಮೀರಿ ಸಂಪತ್ತು ಸಂಗ್ರಹಿಸಿದ್ದಾರೆ ಎಂಬ ಆರೋಪದಡಿ ಸಾಮಾಜಿಕ ಹೋರಾಟಗಾರ ಅಮಿತಾಭ್ ಠಾಕೂರ್ ಸಲ್ಲಿಸಿದ್ದ ಅರ್ಜಿಯನ್ನು ಲೋಕಪಾಲ ಮಂಗಳವಾರ ತಿರಸ್ಕರಿಸಿದೆ.
ದೂರಿನಲ್ಲಿ ಸತ್ಯಾಂಶವಿಲ್ಲ ಹಾಗೂ ಅದು ಕ್ಷುಲ್ಲಕವಾಗಿದೆ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠ ತೀರ್ಮಾನಿಸಿತು. ದೂರು ನಿಶಿಕಾಂತ್ ದುಬೆಗಿಂತಲೂ ಅವರ ಪತ್ನಿಯನ್ನು ಮುಖ್ಯವಾಗಿ ಗುರಿಯಾಗಿಸಿದೆ ಎಂದು ಲೋಕಪಾಲ ಪೀಠವು ತನ್ನ 134 ಪುಟಗಳ ಆದೇಶದಲ್ಲಿ ಹೇಳಿದೆ.
ದುಬೆ ಅವರು 2009ರಿಂದ 2024ರವರೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಗಳ ಆಧಾರದಲ್ಲಿ ದೂರು ಸಲ್ಲಿಸಲಾಗಿತ್ತು. ಅವರ ಪತ್ನಿಯ ಸಂಪತ್ತಿನಲ್ಲಿ ಆದಾಯ ಮೀರಿದ ಏರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ, ದುಬೆಗೆ ಸೇರಿದ ಸಂಪತ್ತಿನಲ್ಲಿ ಆದಾಯ ಮೀರಿದ ಏರಿಕೆಯಾಗಿದೆ ಎಂದು ಸೂಚಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿದ ಲೋಕಪಾಲವು, ಅವರ ಸ್ವಂತ ಸಂಪತ್ತಿನಲ್ಲಿ ಕೇವಲ ಅಲ್ಪ ಬದಲಾವಣೆಗಳು ಮಾತ್ರ ಕಂಡುಬಂದಿವೆ ಎಂದು ಅಭಿಪ್ರಾಯಪಟ್ಟಿದೆ.
ಸಾರ್ವಜನಿಕವಾಗಿ ಲಭ್ಯವಿದ್ದ ಮಾಹಿತಿಗಳ ಆಧಾರದಲ್ಲಿ ಪರಿಶೀಲನೆ ನಡೆಸದೆ ದೂರು ಸಲ್ಲಿಸಿರುವುದಕ್ಕಾಗಿ ಆದೇಶವು ದೂರುದಾರರನ್ನು ಟೀಕಿಸಿದೆ. ಲೋಕಪಾಲ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಅವರಿಗೆ ಲೋಕಪಾಲವು ಶೋಕಾಸ್ ನೋಟಿಸ್ ಕೂಡ ನೀಡಿತ್ತು. ಈಗ ಆ ನೋಟಿಸ್ ಅನ್ನು ಹಿಂದಕ್ಕೆ ಪಡೆಯಲಾಗಿದೆಯಾದರೂ, ತನ್ನ ಖಾಸಗಿತನದ ಉಲ್ಲಂಘನೆ ಮತ್ತು ಪ್ರತಿಷ್ಠೆ ಹಾನಿಗೆ ಸಂಬಂಧಿಸಿ ಠಾಕೂರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ದುಬೆಗೆ ಲೋಕಪಾಲ ನೀಡಿದೆ.







