Constitution of India | ಸಂವಿಧಾನ ಪೀಠಿಕೆಯಿಂದ ಜಾತ್ಯತೀತ ಪದವನ್ನು ತೆಗೆಯಿರಿ; ಮಸೂದೆ ಮಂಡಿಸಿದ BJP ಸಂಸದ!

ಭೀಮ ಸಿಂಗ್ | Photo Credit : Sansad TV/ANI Video Grab
ಹೊಸದಿಲ್ಲಿ,ಡಿ.6: ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದುಹಾಕಲು ಖಾಸಗಿ ಸದಸ್ಯರ ಮಸೂದೆಯನ್ನು BJP ಸದಸ್ಯ ಭೀಮ ಸಿಂಗ್ ಅವರು ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ. ಪೀಠಿಕೆಯಲ್ಲಿ ಈ ಪದಗಳ ಅಗತ್ಯವಿಲ್ಲ ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಅವುಗಳನ್ನು ಸೇರಿಸಲಾಗಿತ್ತು. ಈ ಪದಗಳು ಗೊಂದಲವನ್ನು ಸೃಷ್ಟಿಸುತ್ತವೆ ಮತ್ತು ಮೂಲ ಸಂವಿಧಾನದ ಭಾಗವಾಗಿರಲಿಲ್ಲ ಎಂದು ಅವರು ಪ್ರತಿಪಾದಿಸಿದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, 1949ರಲ್ಲಿ ಅಂಗೀಕಾರಗೊಂಡ ಸಂವಿಧಾನದ ಪೀಠಿಕೆಯಲ್ಲಿ ಈ ಪದಗಳು ಇರಲಿಲ್ಲ. 1976ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನದ 42ನೇ ತಿದ್ದುಪಡಿಯಡಿ ಈ ಪದಗಳನ್ನು ಸೇರಿಸಿದ್ದರು. ಆಗ ಸಂಸತ್ತಿನಲ್ಲಿ ಚರ್ಚೆಯೇ ನಡೆದಿರಲಿಲ್ಲ ಎಂದರು.
ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಮತ್ತು ಜಾರ್ಜ್ ಫೆರ್ನಾಂಡಿಸ್ ಸೇರಿದಂತೆ ಎಲ್ಲ ಪ್ರತಿಪಕ್ಷ ನಾಯಕರನ್ನು ಜೈಲಿಗೆ ತಳ್ಳಲಾಗಿತ್ತು. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿತ್ತು ಮತ್ತು ಅಂತಹ ಸ್ಥಿತಿಯಲ್ಲಿ ಇಂದಿರಾ ಗಾಂಧಿಯವರು ಇವೆರಡು ಪದಗಳನ್ನು ಸೇರಿಸಿದ್ದರು. ಹೀಗಾಗಿ ನಂತರ ಸೇರ್ಪಡೆಗೊಂಡ ಈ ಎರಡು ಪದಗಳನ್ನು ತೆಗೆದುಹಾಕಬೇಕು ಮತ್ತು ಸಂವಿಧಾನವು ತನ್ನ ಮೂಲರೂಪದಲ್ಲಿ ಇರಬೇಕು ಎಂದು ಹೇಳಿದ ಸಿಂಗ್, ಸಂವಿಧಾನ ಸಭೆಯಲ್ಲಿಯೂ ಈ ಪದಗಳ ಬಗ್ಗೆ ಚರ್ಚೆ ನಡೆದಿತ್ತು ಮತ್ತು ಕರಡು ಸಮಿತಿಯ ಅಧ್ಯಕ್ಷ ಡಾ.ಬಿ.ಆರ್.ಅಂಬೇಡ್ಕರ್ ಈ ಪದಗಳ ಸೇರ್ಪಡೆಯೇಕೆ ಬೇಡ ಎನ್ನುವುದನ್ನು ಕಾರಣಗಳ ಸಹಿತ ಸ್ಪಷ್ಟಪಡಿಸಿದ್ದರು ಎಂದರು.
ಇವೆರಡು ಪದಗಳನ್ನು ತುಷ್ಟೀಕರಣ ರಾಜಕೀಯಕ್ಕಾಗಿ ಸೇರಿಸಲಾಗಿತ್ತು ಎಂದು ಆರೋಪಿಸಿದ ಸಿಂಗ್, ‘ಸಮಾಜವಾದಿ’ ಪದವನ್ನು ಅಂದಿನ ಸೋವಿಯತ್ ರಷ್ಯಾವನ್ನು ತೃಪ್ತಿಪಡಿಸಲು ಮತ್ತು ‘ಜಾತ್ಯತೀತ’ ಪದವನ್ನು ಮುಸ್ಲಿಮರನ್ನು ಸಮಾಧಾನಿಸಲು ಸೇರಿಸಲಾಗಿತ್ತು ಎಂದು ವಾದಿಸಿದರು.







