ರಾಜಕೀಯ ಇದುವರೆಗಿನ ಅತ್ಯಂತ ಕಡಿಮೆ ವೇತನದ, ಕಠಿಣ ವೃತ್ತಿ: ಬಿಜೆಪಿ ಸಂಸದೆ ಕಂಗನಾ ರಣಾವತ್

ಕಂಗನಾ ರಣಾವತ್ | Photo Credi : PTI
ಹೊಸದಿಲ್ಲಿ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ತನ್ನ ನಿಷ್ಠುರ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ ಮತ್ತು ಈಗ ತನ್ನ ಹೊಸ ಇನ್ಸ್ಟಾಗ್ರಾಂ ಕಥೆಯೊಂದಿಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೇಂದ್ರ ಸಚಿವ ಸುರೇಶ್ ಗೋಪಿ ಅವರ ರಾಜಕೀಯವನ್ನು ತೊರೆಯುವ ಬಯಕೆಯನ್ನು ಬೆಂಬಲಿಸಿರುವ ಕಂಗನಾ, ರಾಜಕೀಯವು ಕಡಿಮೆ ವೇತನದ ಕೆಲಸ ಎಂಬ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರ ಅಭಿಪ್ರಾಯದ ಕುರಿತು ಸುದ್ದಿಯನ್ನು ಹಂಚಿಕೊಂಡಿರುವ ರಣಾವತ್, ರಾಜಕೀಯವು ಇದುವರೆಗಿನ ತುಂಬ ಕಠಿಣ ವೃತ್ತಿಯಾಗಿದೆ ಮತ್ತು ಅತ್ಯಂತ ಕಡಿಮೆ ವೇತನದ ಕೆಲಸವಾಗಿದೆ. ಇಲ್ಲಿಯೂ ತುಂಬ ವೆಚ್ಚಗಳಿವೆ ಮತ್ತು ಕಲಾವಿದರು ತಮ್ಮ ಸ್ವಂತ ವೃತ್ತಿಗೂ ಸಮಯವನ್ನು ನೀಡಿದರೆ ಅವರನ್ನು ಗೇಲಿ ಮಾಡಲಾಗುತ್ತದೆ ಎಂದಿದ್ದಾರೆ.
‘ಇದರಂತೆ,ಯಾವುದೇ ಪ್ರಾಮಾಣಿಕ ಸಾಧಕನು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬಯಸುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡು ತಮ್ಮ ಕೆಲಸವನ್ನೂ ಮಾಡುವ ವೃತ್ತಿಪರರ ಬಗ್ಗೆ ದೃಷ್ಟಿಕೋನವನ್ನು ಜನರು ಬದಲಿಸಿಕೊಳ್ಳಬೇಕಿದೆ. ನಾವು ಹುದ್ದೆಯನ್ನು ಅಥವಾ ಪ್ರಮುಖ ಖಾತೆಗಳನ್ನು ಹೊಂದಿದ್ದರೂ ನಮ್ಮ ಸ್ವಂತ ವೃತ್ತಿಗಳಲ್ಲಿ ಕೆಲಸ ಮಾಡಲು ನಮಗೆ ಅವಕಾಶವಿರಬೇಕು’ ಎಂದು ಕಂಗನಾ ಹೇಳಿದ್ದಾರೆ.
ಸುರೇಶ್ ಗೋಪಿ ಕಣ್ಣೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂದರ್ಭ, ತನ್ನ ಚಿತ್ರರಂಗದ ವೃತ್ತಿಯನ್ನು ಬಿಟ್ಟು ಸಚಿವನಾಗಬೇಕು ಎಂದು ತಾನೆಂದೂ ಬಯಸಿರಲಿಲ್ಲ. ತಾನು ಸಚಿವನಾದ ಮೇಲೆ ತನ್ನ ಆದಾಯ ಗಣನೀಯವಾಗಿ ಕುಸಿದಿದೆ. ತನಗೆ ಹಚ್ಚು ಆದಾಯ ಗಳಿಸಬೇಕಿದೆ, ಹೀಗಾಗಿ ಚಿತ್ರರಂಗದಲ್ಲಿಯೇ ಮುಂದುವರಿಯಲು ಬಯಸಿದ್ದೇನೆ ಎಂದು ಹೇಳಿದ್ದರು.







