ಪಶ್ಚಿಮ ಬಂಗಾಳ | ಬಿಜೆಪಿ ಸಂಸದ ಖಗೆನ್ ಮುರ್ಮು ಮೇಲೆ ಸ್ಥಳೀಯರಿಂದ ಕಲ್ಲಿನಿಂದ ಹಲ್ಲೆ: ವಿಡಿಯೊ ವೈರಲ್

Photo Credit :X \ @amitmalviya
ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಗ್ರಕತದಲ್ಲಿ ಸೋಮವಾರ ಬಿಜೆಪಿ ಸಂಸದ ಖಗೆನ್ ಮುರ್ಮು ಹಾಗೂ ಶಾಸಕ ಶಂಕರ್ ಘೋಷ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ, ಅವರ ಮೇಲೆ ಸ್ಥಳೀಯರು ಕಲ್ಲುಗಳಿಂದ ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲಿ ಪ್ರಕ್ಷುಬ್ಧ ಸ್ಥಿತಿ ಮನೆ ಮಾಡಿದೆ. ಈ ಘಟನೆಯಲ್ಲಿ ಇಬ್ಬರೂ ನಾಯಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಬಿಜೆಪಿ ನಾಯಕರ ಕಾರಿನ ಗಾಜುಗಳು ಪುಡಿಪುಡಿಯಾಗಿದ್ದು, ಸಂಸದ ಖಗೆನ್ ಮುರ್ಮು ಮೂಗಿನಿಂದ ರಕ್ತ ಸೋರುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಸಕ ಶಂಕರ್ ಘೋಷ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಬಟ್ಟೆಗಳು ಹರಿದಿರುವುದು ವಿಡಿಯೊ ದೃಶ್ಯಗಳಲ್ಲಿ ಕಂಡು ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
TMC’s Jungle Raj in Bengal!
— Amit Malviya (@amitmalviya) October 6, 2025
BJP MP Khagen Murmu, a respected tribal leader and two-time MP from North Malda, was attacked by TMC goons while on his way to Nagrakata in Jalpaiguri’s Dooars region to help with relief and rescue efforts after devastating rains, floods, and… pic.twitter.com/pqpd9Vyrk9
ಈ ದಾಳಿಯ ವಿರುದ್ಧ ರಾಜಕೀಯ ವಾಕ್ಸಮರ ಪ್ರಾರಂಭಗೊಂಡಿದ್ದು, ಪರಿಹಾರ ಕಾರ್ಯಗಳಿಗೆ ಅಡ್ಡಿಯುಂಟು ಮಾಡಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಈ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಉತ್ತರ ಬಂಗಾಳದಲ್ಲಿ ಪ್ರವಾಹ ಮತ್ತು ಭೂಕುಸಿತದಂತಹ ಘಟನೆಗಳು ನಡೆಯುತ್ತಿರುವಾಗಲೇ ಸಂವೇದನಾರಹಿತ ಸಂಭ್ರಮಾಚರಣೆ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಾರ್ವಜನಿಕರ ಆಕ್ರೋಶ ಸ್ಫೋಟಗೊಂಡಿರುವುದರಿಂದ, ಅವರು ಭಯಭೀತರಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ವಿಧಾನಸಭಾ ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುವೇಂದು ಅಧಿಕಾರಿ, "ಉತ್ತರ ಬಂಗಾಳ ಪ್ರವಾಹದಲ್ಲಿ ಮುಳುಗಿದ್ದಾಗ ತಾನು ಸೆಲೆಬ್ರಿಟಿಗಳೊಂದಿಗೆ ಹಬ್ಬವೊಂದರಲ್ಲಿ ಸಂವೇದನಾರಹಿತವಾಗಿ ನೃತ್ಯ ಮಾಡಿದ್ದರ ವಿರುದ್ಧ ಪಶ್ಚಿಮ ಬಂಗಾಳದ ಜನರು ಅಸಮಾಧಾನಗೊಂಡಿದ್ದಾರೆ ಎಂಬುದು ಮಮತಾ ಬ್ಯಾನರ್ಜಿಗೆ ತಡವಾಗಿ ಅರ್ಥವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಸಂಸದರು ಮತ್ತು ಶಾಸಕರು ಪ್ರವಾಹಪೀಡಿತ ಪ್ರದೇಶಗಳಿಗೆ ನೆರವು ನೀಡಲು ಮುಂದಾಗಿದ್ದಾರೆ. ಹೀಗಾಗಿ ಅವರು ಭಯಭೀತರಾಗಿದ್ದು, ಬಿಜೆಪಿ ಸಂಸದರು ಹಾಗೂ ಶಾಸಕರು ಪರಿಹಾರ ಕಾರ್ಯಗಳಿಂದ ದೂರ ಉಳಿಯುವಂತೆ ಮಾಡಲು, ತಮ್ಮ ವಿಶೇಷ ಸಮುದಾಯದ ಗೂಂಡಾಗಳನ್ನು ಅವರ ಮೇಲೆ ಛೂ ಬಿಟ್ಟಿದ್ದಾರೆ" ಎಂದು ಆರೋಪಿಸಿದ್ದಾರೆ.
ಆದರೆ, ಈ ಆರೋಪಗಳ ಕುರಿತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.







