ಲೋಕಸಭಾ ಚುನಾವಣೆ: ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಿಜೆಪಿ

Photo: NDTV
ಹೊಸದಿಲ್ಲಿ: ಇಂದು (ರವಿವಾರ) ಬೆಳಗ್ಗೆ ಮುಂಬರುವ ಲೋಕಸಭಾ ಚುನಾವಣೆಗಾಗಿನ ಬಿಜೆಪಿಯ ಬಹು ನಿರೀಕ್ಷಿತ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಪ್ರಣಾಳಿಕೆಯಲ್ಲಿ ಬಡವರು, ಯುವಕರು, ರೈತರು ಹಾಗೂ ಮಹಿಳೆಯರ (GYAN) ಉನ್ನತಿಗೆ ಒತ್ತು ನೀಡಲಾಗಿದೆ. ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿಯ ಪ್ರಣಾಳಿಕೆಯು ವಿಕಸಿತ ಭಾರತದ ನಾಲ್ಕು ಸ್ತಂಭಗಳಾದ ನಾರಿ ಶಕ್ತಿ, ಯುವ ಶಕ್ತಿ, ರೈತರು ಹಾಗೂ ಬಡವರತ್ತ ಗಮನ ಕೇಂದ್ರೀಕರಿಸಿದೆ. ನಮ್ಮ ಸರಕಾರವು ಎಲ್ಲ ಮನೆಗಳಿಗೂ ಕೊಳವೆ ಮಾರ್ಗದ ಮೂಲಕ ಅಡುಗೆ ಅನಿಲ ಹಾಗೂ ಸೌರ ವಿದ್ಯುತ್ ಮೂಲಕ ಉಚಿತ ವಿದ್ಯುತ್ ಒದಗಿಸಲು ಗಮನ ಕೇಂದ್ರೀಕರಿಸಿದೆ ಎಂದು ಹೇಳಿದರು.
ಕೇಂದ್ರ ಸರಕಾರದಿಂದ ಒದಗಿಸಲಾಗುತ್ತಿರುವ ಉಚಿತ ಪಡಿತರವನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಬೆಲೆಗಳನ್ನು ಸ್ಥಿರಗೊಳಿಸಲು ಹಾಗೂ ಬಡವರ ತಟ್ಟೆಗಳಿಗೆ ರಕ್ಷಣೆ ಒದಗಿಸಲು ಬೇಳೆಕಾಳುಗಳು, ಖಾದ್ಯ ತೈಲಗಳು ಹಾಗೂ ತರಕಾರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸರಕಾರ ಗಮನ ಹರಿಸಲಿದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಹಾಗೂ ಪಿಎಂ ಆವಾಸ್ ಯೋಜನೆಗಳನ್ನು ವಿಸ್ತರಿಸಲಾಗುವುದು ಹಾಗೂ ಎಲ್ಲ ಮನೆಗಳಿಗೂ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದೂ ಭರವಸೆ ನೀಡಲಾಗಿದೆ.







