ಮಧ್ಯಪ್ರದೇಶ | ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿ, ಆರೆಸ್ಸೆಸ್ಗೆ ಸೇರಿದ ವ್ಯಕ್ತಿಗಳನ್ನು ಬಿಎಲ್ಒಗಳಿಗೆ ಸಹಾಯಕರಾಗಿ ನೇಮಕ!

ಸಾಂದರ್ಭಿಕ ಚಿತ್ರ (Photo: PTI)
ಭೋಪಾಲ್ : ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಬಿಜೆಪಿ, ಆರೆಸ್ಸೆಸ್ಗೆ ಸಂಬಂಧಿಸಿದ ವ್ಯಕ್ತಿಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಸಹಾಯಕರಾಗಿ ನೇಮಿಸಿರುವುದು ಬೆಳಕಿಗೆ ಬಂದಿದೆ.
ರಾಜಕೀಯ ಪಕ್ಷವೊಂದರ ಜೊತೆ ನಿಕಟ ಸಂಬಂಧ ಹೊಂದಿದ್ದ ಕೆಲವು ವ್ಯಕ್ತಿಗಳನ್ನು ಬೂತ್ ಮಟ್ಟದ ಅಧಿಕಾರಿಯ ಸಹಾಯಕರಾಗಿ ʼತಪ್ಪಾಗಿʼ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಒಪ್ಪಿಕೊಂಡಿದ್ದಾರೆ.
ಚುನಾವಣಾ ಆಯೋಗದ ಆದೇಶದ ಮೇರೆಗೆ ಮಧ್ಯಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನವೆಂಬರ್ 4ರಂದು ಪ್ರಾರಂಭವಾಯಿತು. ಈ ಪ್ರಕ್ರಿಯೆ ಡಿಸೆಂಬರ್ 4ರವರೆಗೆ ಮುಂದುವರಿಯಲಿದೆ. ಡಿಸೆಂಬರ್ 9 ರಂದು ಕರಡು ಪಟ್ಟಿ ಪ್ರಕಟಣೆಯಾಗಲಿದೆ. ವರದಿಯ ಪ್ರಕಾರ, ರಾಜ್ಯಾದ್ಯಂತ ಪ್ರತಿಯೊಬ್ಬ ಬಿಎಲ್ಒಗೆ ಇಬ್ಬರಿಂದ ಮೂವರು ಸಹಾಯಕರನ್ನು ನಿಯೋಜಿಸಲಾಗಿದೆ.
ಕೆಲವು ಬಿಎಲ್ಒ ಸಹಾಯಕರು ಆಡಳಿತಾರೂಢ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು ದಾಟಿಯಾ ಜಿಲ್ಲೆಯ ಉಪ ವಿಭಾಗೀಯ ಅಧಿಕಾರಿ ಮತ್ತು ಚುನಾವಣಾ ನೋಂದಣಿ ಅಧಿಕಾರಿಯ ಕಚೇರಿಯಿಂದ ನೀಡಲಾದ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನೇಮಕಗೊಂಡ ನಾಲ್ವರು ಸಹಾಯಕರು ಬಿಜೆಪಿ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ದಾಟಿಯಾ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಪ್ನಿಲ್ ವಾಂಖಡೆ ಈ ಕುರಿತು ಪ್ರತಿಕ್ರಿಯಿಸಿ, ಬಿಎಲ್ಒ ಸಹಾಯಕರ ಪಟ್ಟಿಯಲ್ಲಿ ಮೂರು ಹೆಸರುಗಳನ್ನು ತಪ್ಪಾಗಿ ಸೇರಿಸಲಾಗಿದೆ. ನಾನು ಅವರ ಹೆಸರನ್ನು ಸೇರಿಸಲು ಆದೇಶ ಹೊರಡಿಸಲಿಲ್ಲ. ದಾಟಿಯಾ ವಿಧಾನಸಭಾ ಕ್ಷೇತ್ರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಈ ಆದೇಶವನ್ನು ಹೊರಡಿಸಿದ್ದಾರೆ. ಮೂರು ಹೆಸರುಗಳನ್ನು ತಪ್ಪಾಗಿ ಸೇರಿಸಲಾಗಿದೆ. ಈ ಬಗ್ಗೆ ಎಸ್ಡಿಎಂಗೆ ನೋಟಿಸ್ ನೀಡಲಾಗಿದೆ. ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. ತಪ್ಪಾಗಿ ಸೇರ್ಪಡೆಗೊಂಡವರನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎಂದು ಹೇಳಿದ್ದಾರೆ.







