ಟಿಎಂಸಿಯನ್ನು ಕಿತ್ತೊಗೆಯಲು ಮಹಾಮೈತ್ರಿಗೆ ಬಿಜೆಪಿ ಕರೆ: ಕಾಂಗ್ರೆಸ್, ಸಿಪಿಎಂ ತಿರಸ್ಕಾರ

ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ - Photo | ANI
ಕೋಲ್ಕತಾ: ರಾಜ್ಯದಲ್ಲಿ ಆಡಳಿತಾರೂಢ ಟಿಎಂಸಿಯನ್ನು ಅಧಿಕಾರದಿಂದ ಕಿತ್ತೊಗೆಯಲು 2026ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸುವಂತೆ ಮತ್ತು ಮಹಾ ಮೈತ್ರಿಕೂಟವನ್ನು ರಚಿಸುವಂತೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ರವಿವಾರ ಕಾಂಗ್ರೆಸ್ ಮತ್ತು ಸಿಪಿಎಂ ಅನ್ನು ಆಗ್ರಹಿಸಿದ್ದಾರೆ.
ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ಬಂಗಾಳದಲ್ಲಿ ‘ಇಸ್ಲಾಮಿಕ್ ಮೂಲಭೂತವಾದ ’ ಮತ್ತು ‘ಮತಾಂಧತೆ’ಯ ವಿರುದ್ಧ ಹೋರಾಡಲು ಸಾಮೂಹಿಕ ರಾಜಕೀಯ ಪ್ರಯತ್ನ ಅಗತ್ಯವಾಗಿದೆ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಇಂದಿರಾ ಗಾಂಧಿ ಗ್ರಂಥಾಲಯದಲ್ಲಿ 70,000 ಪುಸ್ತಕಗಳನ್ನು ಸುಡಲಾಗಿದೆ ಮತ್ತು ಮುರ್ಷಿದಾಬಾದ್ ನಲ್ಲಿ ಶಿಕ್ಷಕರೋರ್ವರ ಮೇಲೆ ಅವರ ಶಿಷ್ಯರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಅವರು,ಈ ಘಟನೆಗಳು ಮತಾಂಧ ಇಸ್ಲಾಮಿಕ್ ಫ್ಯಾಸಿಸಂನ ಉದಾಹರಣೆಗಳಾಗಿವೆ. ಅದು ಇಡೀ ಜಗತ್ತಿಗೆ ಶಾಪವಾಗಿದೆ ಮತ್ತು ಮಾನವ ನಾಗರಿಕತೆಗೆ ಕ್ಯಾನ್ಸರ್ ಆಗಿದೆ, ಅದನ್ನು ನಿರ್ಮೂಲನ ಮಾಡಲೇಬೇಕು ಎಂದರು.
ಯಾವುದೇ ರಾಜಕೀಯ ಪಕ್ಷವು ಏಕಾಂಗಿಯಾಗಿ ಈ ವಿಮೋಚನೆಗೆ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.ಅದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಮುಂದೆ ಬರಬೇಕು ಎಂದು ಭಟ್ಟಾಚಾರ್ಯ ಹೇಳಿದರು.
ಭಟ್ಟಾಚಾರ್ಯ ಅವರ ಪ್ರಸ್ತಾವವನ್ನು ತಿರಸ್ಕರಿಸಿರುವ ಕಾಂಗ್ರೆಸ್ ಮತ್ತ ಸಿಪಿಎಂ, ಜಾತ್ಯತೀತ ಬಂಗಾಳದಲ್ಲಿ ಬಿಜೆಪಿಗೆ ಯಾವುದೇ ಸ್ಥಾನವಿಲ್ಲ ಎಂದು ಹೇಳಿವೆ.