ತಮಿಳುನಾಡಿನಲ್ಲಿ ವಿಭಜನಕಾರಿ ಕಾರ್ಯಸೂಚಿ ನಡೆಯುವುದಿಲ್ಲ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು: ಸ್ಟಾಲಿನ್ ವಾಗ್ದಾಳಿ

Photo Credit: PTI
ಚೆನ್ನೈ: ತಮಿಳುನಾಡಿನಲ್ಲಿ ವಿಭಜನಕಾರಿ ಕಾರ್ಯಸೂಚಿ ನಡೆಯುವುದಿಲ್ಲ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಎಂದು ಶನಿವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಾಗ್ದಾಳಿ ನಡೆಸಿದರು.
ಕೇಂದ್ರ ಬಜೆಟ್ ನಲ್ಲಿ ತಮಿಳುನಾಡನ್ನು ನಿರ್ಲಕ್ಷಿಸಿರುವುದರ ವಿರುದ್ಧ ಚೆನ್ನೈನ ಸಮೀಪ ಆಯೋಜಿಸಲಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸ್ಟಾಲಿನ್, “ತಮಿಳುನಾಡಿನಲ್ಲಿ ವಿವಿಧ ನಂಬಿಕೆಗಳು ಹಾಗೂ ಜಾತಿಗಳೊಂದಿಗೆ ಶಾಂತಿಯುತವಾಗಿ ಸಹಜೀವನ ನಡೆಸುತ್ತಿರುವ ಜನರು ತಮ್ಮನ್ನು ತಾವು ತಮಿಳು ಎಂದು ಮಾತ್ರ ಗುರುತಿಸಿಕೊಂಡಿದ್ದು, ಅವರೆಂದಿಗೂ ವಿಭಜನಕಾರಿ ಶಕ್ತಿಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳದಿದ್ದರೆ, ಅದು ತನ್ನನ್ನು ತಾನು ಶಿಸ್ತಿಗೊಳಪಡಿಸಿಕೊಳ್ಳಬೇಕಾದ ಅನಿವಾರ್ಯತೆಗೊಳಗಾಗಲಿದೆ” ಎಂದು ಎಚ್ಚರಿಸಿದರು.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹಾಗೂ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಡಿಎಂಕೆ ಮುಖ್ಯಸ್ಥರೂ ಆದ ಸ್ಟಾಲಿನ್, ಅವರಿಬ್ಬರೂ ಡಿಎಂಕೆಯ ಪ್ರಮುಖ ಪ್ರಚಾರಕರು ಎಂದು ಗೇಲಿ ಮಾಡಿದರು. ದಿಲ್ಲಿಯಲ್ಲಿರುವವರು ಇವರಿಬ್ಬರನ್ನು ಬದಲಿಸಬಾರದು ಎಂದು ವ್ಯಂಗ್ಯವಾಗಿ ಮನವಿಯನ್ನೂ ಮಾಡಿದರು. ತಮಿಳುನಾಡಿನ ಮೂಲಸೌಕರ್ಯ ಯೋಜನೆಗಳು ಹಾಗೂ ನೈಸರ್ಗಿಕ ವಿಕೋಪಗಳಿಗೆ ತುತ್ತಾದ ಜನರಿಗೆ ಪುನರ್ವಸತಿ ಹಾಗೂ ಪರಿಹಾರ ಒದಗಿಸಲು ನಿಧಿ ಒದಗಿಸದೆ ಕೇಂದ್ರ ಸರಕಾರವು ತಮಿಳುನಾಡಿನ ವಂಚಿಸುತ್ತಿದೆ ಎಂದೂ ಅವರು ಆರೋಪಿಸಿದರು.
ತಮಿಳುನಾಡಿನ ಬೇಡಿಕೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಕೇಂದ್ರ ಸರಕಾರವನ್ನು ಟೀಕಿಸಿದ ಸ್ಟಾಲಿನ್, ಹಲವು ವಲಯಗಳಿಂದ ಏನೇ ಅಡೆತಡೆ ಬಂದರೂ, ರಾಜ್ಯವು ಪ್ರಗತಿ ಸಾಧಿಸುವುದನ್ನು ಮುಂದುವರಿಸಲಿದೆ ಎಂದು ಘೋಷಿಸಿದರು.
“ಬಜೆಟ್ ನಲ್ಲಿ ಬಿಹಾರ ಗರಿಷ್ಠ ಪ್ರಮಾಣದ ಘೋಷಣೆಗಳನ್ನು ಪಡೆದಿದೆ. ನಾವು ಬಿಹಾರದ ವಿರುದ್ಧವಿಲ್ಲ, ಆದರೆ, ತಮಿಳುನಾಡಿನ ಗತಿಯೇನು? ನೀವು ತಮಿಳುನಾಡಿನ ಎಲ್ಲ ಯೋಜನೆಗಳಿಗೂ ನಿಧಿ ನಿರಾಕರಿಸುವುದನ್ನು ಮುಂದುವರಿಸಿದರೆ, ಇದನ್ನು ಕೇಂದ್ರ ಬಜೆಟ್ ಎಂದಾದರೂ ಏಕೆ ಕರೆಯಬೇಕು” ಎಂದು ಅವರು ಹರಿಹಾಯ್ದರು.
ಮದುರೈ ಬಳಿಯ ತಿರುಪರಂಕುಂದ್ರಂ ದೇವಾಲಯವಿರುವ ಬೆಟ್ಟದಲ್ಲಿ ಮುಸ್ಲಿಂ ಸಮುದಾಯದ ಕೆಲವು ವ್ಯಕ್ತಿಗಳು ಮಾಂಸ ಸೇವನೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಹಾಗೂ ಇನ್ನಿತರ ಕೆಲವು ಬಲಪಂಥೀಯ ಹಿಂದೂ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿ, ದೇವಾಲಯದೆದುರು ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.







