ಬಿಜೆಪಿ 'ವಂದೇ ಮಾತರಂ' ಅನ್ನು ದ್ವೇಷದ ಭಾಷೆಯಾಗಿ ಪರಿವರ್ತಿಸಿದೆ: ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪ

ರಣದೀಪ್ ಸಿಂಗ್ ಸುರ್ಜೆವಾಲಾ (Photo: PTI)
ಚಂಡೀಗಢ: ಮಾತೃಭೂಮಿ ಮೇಲಿನ ಗೌರವವನ್ನು ಸೂಚಿಸುವ "ವಂದೇ ಮಾತರಂ" ಎಂಬ ಘೋಷಣೆಯನ್ನು ಬಿಜೆಪಿ ದ್ವೇಷದ ಭಾಷೆಯನ್ನಾಗಿ ಪರಿವರ್ತಿಸಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ಹರ್ಯಾಣದಲ್ಲಿ ಬಿಜೆಪಿಯು ವಿಭಜಕ ರಾಜಕೀಯ ಮಾದರಿಯನ್ನು ಅನುಸರಿಸುತ್ತಿದೆ. ಜಾಟ್ ವಿರುದ್ಧ ಜಾಟ್ ಅಲ್ಲದವರು, ಪಂಜಾಬಿ ವಿರುದ್ಧ ಅಗರ್ವಾಲ್, ರವಿದಾಸಿಯಾ ವಿರುದ್ಧ ವಾಲ್ಮೀಕಿ, ಸಿಖ್ ವಿರುದ್ಧ ಹಿಂದೂಗಳು, ಬ್ರಾಹ್ಮಣರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ ನಡುವೆ ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ. ಮೇವಾತ್ನಲ್ಲಿ ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸುವ ಮೂಲಕ ಸಮುದಾಯಗಳನ್ನು ಧ್ರುವೀಕರಿಸಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದರು.
ದ್ವೇಷದ ಹರಡುವಿಕೆಯು ಎಷ್ಟರ ಮಟ್ಟಿಗೆ ತಲುಪಿದೆಯೆಂದರೆ, ಭಗವಾನ್ ಕೃಷ್ಣನ ಬೋಧನೆಗಳಿಗೆ ಸಂಬಂಧಿಸಿದ ಪವಿತ್ರ ಭೂಮಿ ಎಂದು ಪರಿಗಣಿಸಿದ ಕೈಥಲ್-ಕಪಿಸ್ಥಲ್ ನಲ್ಲಿ ಕೂಡ ಜನರು ತಮ್ಮವರನ್ನೇ ಹೊರಗಿನವರು ಎಂದು ಬ್ರಾಂಡ್ ಮಾಡಿ ನಿಂದಿಸುತ್ತಿದ್ದಾರೆ. ಕೃಷಿ ಮೂಲಕ ರಾಷ್ಟ್ರಕ್ಕೆ ಆಹಾರ ನೀಡುವಲ್ಲಿ ಪ್ರಸಿದ್ಧವಾದ ಈ ರಾಜ್ಯದಲ್ಲಿ “ದ್ವೇಷದ ಬೆಳೆ”ಯನ್ನು ಬಿತ್ತಿದ್ದಕ್ಕೆ ಯಾರು ಹೊಣೆಗಾರರು ಎಂದು ಹರ್ಯಾಣದ ಜನತೆಗೆ, ವಿಶೇಷವಾಗಿ ಯುವಕರು ಮತ್ತು ರೈತರಿಗೆ ರಣದೀಪ್ ಸಿಂಗ್ ಸುರ್ಜೆವಾಲಾ ಕೇಳಿದ್ದಾರೆ.
ಮೌನದ ಸಮಯ ಮುಗಿದಿದೆ, ಜನರು ವಿಭಜನೆಗಳನ್ನು ಮೀರಿ ಭಗವದ್ಗೀತೆಯಲ್ಲಿ ಬೋಧಿಸಿದ ಪ್ರೇಮ, ಕರ್ತವ್ಯ ಮತ್ತು ಧರ್ಮದ ಸಂದೇಶವನ್ನು ಅನುಸರಿಸಬೇಕೆಂದು ಸುರ್ಜೆವಾಲಾ ಒತ್ತಾಯಿಸಿದರು.







