ಬಿಜೆಪಿಯ ಗುರಿ ನೆಹರೂ ಅವರನ್ನು ಅಳಿಸುವುದಲ್ಲ, ನಾಶಮಾಡುವುದು : ಸೋನಿಯಾ ಗಾಂಧಿ

ಸೋನಿಯಾ ಗಾಂಧಿ (File Photo: PTI)
ಹೊಸದಿಲ್ಲಿ : ಬಿಜೆಪಿಯ ಗುರಿ ನೆಹರೂ ಅವರನ್ನು ಅಳಿಸುವುದಲ್ಲ, ನಾಶಮಾಡುವುದು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಜವಾಹರ್ ಭವನದಲ್ಲಿ ನೆಹರೂ ಸೆಂಟರ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ನೆಹರೂ ಅವರ ಕೊಡುಗೆಗಳ ವಿಶ್ಲೇಷಣೆ ಮತ್ತು ಟೀಕೆ ಸ್ವಾಗತಾರ್ಹವಾದರೂ, ಅವರು ಬರೆದ ಮತ್ತು ಹೇಳಿದ್ದನ್ನು ಉದ್ದೇಶಪೂರ್ವಕವಾಗಿ ತಿರುಚುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಸೋನಿಯಾ ಗಾಂಧಿ ತಮ್ಮ ಭಾಷಣದಲ್ಲಿ, ಬಿಜೆಪಿ ಅಥವಾ ಆರೆಸ್ಸೆಸ್ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ನೆಹರೂ ಅವರನ್ನು ದೂಷಿಸುವುದು ಇಂದಿನ ಆಡಳಿತ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರ ಗುರಿ ನೆಹರೂ ಅವರನ್ನು ಅಳಿಸಿಹಾಕುವುದು ಮಾತ್ರವಲ್ಲ, ನಮ್ಮ ರಾಷ್ಟ್ರ ಯಾವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬುನಾದಿಯ ಮೇಲೆ ನಿಂತಿದೆಯೋ ಆ ಬುನಾದಿಯನ್ನೇ ನಾಶ ಮಾಡುವುದು ಅವರ ಉದ್ದೇಶವಾಗಿದೆ ಎಂದು ಹೇಳಿದರು.
ಬಾಬರಿ ಮಸೀದಿ ನಿರ್ಮಿಸಲು ನೆಹರೂ ಸಾರ್ವಜನಿಕ ಹಣವನ್ನು ಬಳಸಲು ಬಯಸಿದ್ದರು. ಆದರೆ ಆ ಕ್ರಮವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ತಡೆದರು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿ ವಿವಾದ ಸೃಷ್ಟಿಸಿದ ಕೆಲವೇ ದಿನಗಳಲ್ಲಿ ಸೋನಿಯಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಈ ಹೇಳಿಕೆಯನ್ನು ಸುಳ್ಳು ಎಂದು ಕರೆದಿದೆ. ರಾಜನಾಥ್ ಸಿಂಗ್ ಧ್ರುವೀಕರಣಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ನೆಹರೂ ಅವರ ವಿರುದ್ಧದ ಯೋಜನೆಯ ಹಿಂದಿರುವ ಶಕ್ತಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನೂ ವಹಿಸಿರಲಿಲ್ಲ. ಸಂವಿಧಾನ ರಚನೆಯಲ್ಲೂ ಭಾಗವಹಿಸಿರಲಿಲ್ಲ. ಇದು ಬಹಳ ಹಿಂದೆಯೇ ದ್ವೇಷದ ವಾತಾವರಣವನ್ನು ಸೃಷ್ಟಿಸಿದ ಸಿದ್ಧಾಂತವಾಗಿದ್ದು, ಅಂತಿಮವಾಗಿ ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣವಾಯಿತು. ಗಾಂಧೀಜಿಯ ಹಂತಕರನ್ನು ಇಂದಿಗೂ ಅವರ ಅನುಯಾಯಿಗಳು ವೈಭವೀಕರಿಸುತ್ತಿದ್ದಾರೆ. ಇದು ಧರ್ಮಾಂದ ಮತ್ತು ಕ್ರೂರವಾಗಿ ಕೋಮುವಾದಿ ದೃಷ್ಟಿಕೋನವನ್ನು ಹೊಂದಿರುವ ಸಿದ್ಧಾಂತವಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದರು.
ನೆಹರೂ ಅಂತಹ ವ್ಯಕ್ತಿಗಳ ಜೀವನವನ್ನು ವಿಶ್ಲೇಷಿಸುವುದು ಮತ್ತು ಟೀಕಿಸುವುದು ಸಹಜ. ಆದರೆ ಇತಿಹಾಸವನ್ನು ಪುನಃ ಬರೆಯುವ, ಒರಟಾದ ಮತ್ತು ಸ್ವಾರ್ಥ ಪ್ರಯತ್ನದ ಮೂಲಕ ಅವರ ಪರಂಪರೆಯನ್ನು ಕೆಡವಲು ಪ್ರಯತ್ನಿಸುವ ವ್ಯವಸ್ಥಿತ ಪ್ರಯತ್ನವು ಸ್ವೀಕಾರಾರ್ಹವಲ್ಲ ಎಂದು ಸೋನಿಯಾ ಗಾಂಧಿ ಹೇಳಿದರು.







