2022-23ರಲ್ಲಿ ಚುನಾವಣಾ ಟ್ರಸ್ಟ್ ಗಳು ನೀಡಿದ ದೇಣಿಗೆಗಳಲ್ಲಿ ಶೇ.70.6 ಬಿಜೆಪಿ ಪಾಲು : ವರದಿ
Photo: PTI
ಹೊಸದಿಲ್ಲಿ: 2022-23ರ ವಿತ್ತ ವರ್ಷದಲ್ಲಿ ಚುನಾವಣಾ ಟ್ರಸ್ಟ್ ಗಳು ನೀಡಿದ ಒಟ್ಟು ದೇಣಿಗೆಗಳಲ್ಲಿ ಶೇ.70.6ರಷ್ಟನ್ನು ಬಿಜೆಪಿಯು ಪಡೆದುಕೊಂಡಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ತಿಳಿಸಿದೆ.
ಯುಪಿಎ ಸರಕಾರವು ಕಾರ್ಪೊರೇಟ್ ಗುಂಪುಗಳು ಮತ್ತು ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನೀಡಲು ಅನುಕೂಲವಾಗುವಂತೆ 2013ರಲ್ಲಿ ಚುನಾವಣಾ ಟ್ರಸ್ಟ್ ಗಳ ಯೋಜನೆಯನ್ನು ಜಾರಿಗೊಳಿಸಿತ್ತು. ಅನಾಮಧೇಯವಾಗಿರುವ ಚುನಾವಣಾ ಬಾಂಡ್ ಗಳಿಗಿಂತ ಭಿನ್ನವಾಗಿ ಚುನಾವಣಾ ಟ್ರಸ್ಟ್ ಗಳು ತಮ್ಮ ದೇಣಿಗೆಯ ವರದಿಗಳನ್ನು ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯೊಂದಿಗೆ ನೋಂದಣಿಗೊಂಡಿರುವ 18 ಚುನಾವಣಾ ಟ್ರಸ್ಟ್ ಗಳ ಪೈಕಿ 13 ಟ್ರಸ್ಟ್ ಗಳು 2022-23ರ ವಿತ್ತವರ್ಷಕ್ಕಾಗಿ ತಮ್ಮ ದೇಣಿಗೆ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ. ಈ ಪೈಕಿ ಕೇವಲ ಐದು ಟ್ರಸ್ಟ್ ಗಳು ಆ ಅವಧಿಯಲ್ಲಿ ದೇಣಿಗೆಗಳನ್ನು ಸ್ವೀಕರಿಸಿರುವುದಾಗಿ ಘೋಷಿಸಿವೆ. ಈ ಐದು ಟ್ರಸ್ಟ್ ಗಳಲ್ಲಿ ಪ್ರುಡೆಂಟ್, ಸಮಾಜ, ಪರಿವರ್ತನ, ಟ್ರಂಫ್ ಮತ್ತು ಐಂಝಿಗಾರ್ಟಿಗ್ ಚುನಾವಣಾ ಟ್ರಸ್ಟ್ ಗಳು ಸೇರಿವೆ.
ಚುನಾವಣಾ ಟ್ರಸ್ಟ್ ಗಳು ವಿತ್ತವರ್ಷದಲ್ಲಿ ಸ್ವೀಕರಿಸುವ ಒಟ್ಟು ದೇಣಿಗೆಗಳ ಕನಿಷ್ಠ ಶೇ.95 ರಷ್ಟನ್ನು ವಿತರಿಸುವುದು ಅಗತ್ಯವಾಗಿದೆ.
ಈ ಐದು ಟ್ರಸ್ಟ್ ಗಳು 2022-23ರಲ್ಲಿ 366,49,50,000 ರೂ.ಗಳ ದೇಣಿಗೆಗಳನ್ನು ಸ್ವೀಕರಿಸಿದ್ದು, ವಿವಿಧ ರಾಜಕೀಯ ಪಕ್ಷಗಳಿಗೆ 366.48 ಕೋಟಿ ರೂ.ಗಳನ್ನು ದೇಣಿಗೆ ನೀಡಿವೆ. ಈ ಐದು ಟ್ರಸ್ಟ್ ಗಳು ದೇಣಿಗೆ ನೀಡಿದ ಒಟ್ಟು ಮೊತ್ತದಲ್ಲಿ ಬಿಜೆಪಿಯು 259.08 ಕೋಟಿ ರೂ.ಗಳನ್ನು ಸ್ವೀಕರಿಸಿದೆ ಎಂದು ಎಡಿಆರ್ ವರದಿಯು ತೋರಿಸಿದೆ.
ಈ ಅವಧಿಯಲ್ಲಿ ಪ್ರುಡೆಂಟ್ ಟ್ರಸ್ಟ್ ಬಿಜೆಪಿಗೆ 256.25 ಕೋಟಿ ರೂ.ಗಳನ್ನು ನೀಡಿದ್ದರೆ, ಸಮಾಜ ಟ್ರಸ್ಟ್ ಬಿಜೆಪಿಗೆ 1.5 ಕೋಟಿ ರೂ. ಮತ್ತು ಕಾಂಗ್ರೆಸ್ ಗೆ 50 ಲಕ್ಷ ರೂ.ಗಳ ದೇಣಿಗೆ ನೀಡಿದೆ.
ಡಿಸೆಂಬರ್ವರೆಗೆ ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದ ಬಿಆರ್ಎಸ್ 90 ಕೋಟಿ ರೂ.ಅಥವಾ ಒಟ್ಟು ದೇಣಿಗೆಗಳ ಶೇ.24.56ರಷ್ಟನ್ನು ಸ್ವೀಕರಿಸಿದೆ. ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಾರ್ಟಿ, ದಿಲ್ಲಿಯ ಆಪ್ ಮತ್ತು ಕಾಂಗ್ರೆಸ್ ಒಟ್ಟು 17.4 ಕೋಟಿ ರೂ.ಗಳ ದೇಣಿಗೆಗಳನ್ನು ಸ್ವೀಕರಿಸಿವೆ.
ಅಗ್ರ 10 ಕಾರ್ಪೊರೇಟ್ ದಾನಿಗಳು ಚುನಾವಣಾ ಟ್ರಸ್ಟ್ ಗಳಿಗೆ 332.26 ಕೋಟಿ ರೂ.ಗಳ ದೇಣಿಗೆಗಳನ್ನು ನೀಡಿದ್ದು, ಇದು ಟ್ರಸ್ಟ್ ಗಳು 2022-23ರಲ್ಲಿ ಸ್ವೀಕರಿಸಿದ್ದ ಒಟ್ಟು ದೇಣಿಗೆಗಳ ಶೇ.90.66ರಷ್ಟಿದೆ.
ಮೇಘಾ ಇಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ಸ್ ಪ್ರುಡೆಂಟ್ ಟ್ರಸ್ಟ್ ಗೆ 87 ಕೋಟಿ ರೂ.ಗಳ ಅತ್ಯಂತ ದೊಡ್ಡ ಕಾರ್ಪೊರೇಟ್ ದೇಣಿಗೆಯನ್ನು ನೀಡಿದ್ದು, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ 50.25 ಕೋಟಿ ರೂ., ಆರ್ಸೆಲರ್ಮಿತ್ತಲ್ ನಿಪ್ಪಾನ್ ಸ್ಟೀಲ್ ಮತ್ತು ಅಭಿನಂದ ವೆಂಚರ್ಸ್ ತಲಾ 50 ಕೋಟಿ ರೂ.ಗಳ ದೇಣಿಗೆಗಳನ್ನು ನೀಡಿವೆ ಎಂದು ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.