ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ!; ಏನಿದು ಬ್ಲ್ಯಾಕ್ ಬಾಕ್ಸ್, ಅದೇಕೆ ನಿರ್ಣಾಯಕ?

Photo credit: PTI
ಹೊಸದಿಲ್ಲಿ: ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಲಂಡನ್ ಗೆ ಹೊರಟಿದ್ದ 787-8 ಡ್ರೀಮ್ಲೈನರ್ ಏರ್ ಇಂಡಿಯಾ ವಿಮಾನ (ಎಐ171) ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 260ಕ್ಕೇರಿದೆ. ವಿಮಾನದಲ್ಲಿ 230 ಮಂದಿ ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿ ಇದ್ದರು. ಈ ಪೈಕಿ ಒಬ್ಬರು ಮಾತ್ರ ಪವಾಡಸದೃಶವಾಗಿ ಉಳಿದುಕೊಂಡಿದ್ದಾರೆ. ಆದರೆ ವಿಮಾನ ವೈದ್ಯಕೀಯ ಸಿಬ್ಬಂದಿಯ ಹಾಸ್ಟೆಲ್ ಗೆ ಅಪ್ಪಳಿಸಿ ಬೆಂಕಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ದುರಂತದಿಂದ ಒಟ್ಟು ಮೃತಪಟ್ಟವರ ಸಂಖ್ಯೆ 260ಕ್ಕೇರಿದೆ ಎಂದು ವರದಿಯಾಗಿದೆ.
ವಿಮಾನ ಅಪಘಾತ ಸಂಭವಿಸಿದಾಗೆಲ್ಲ ಬ್ಲ್ಯಾಕ್ ಬಾಕ್ಸ್ ಸುದ್ದಿಯಾಗುತ್ತದೆ. ನಿಖರವಾಗಿ ಈ ಬ್ಲ್ಯಾಕ್ ಬಾಕ್ಸ್ ಎಂದರೇನು ಮತ್ತು ವಾಯುಯಾನದಲ್ಲಿ ಅದಕ್ಕೇಕೆ ಅಷ್ಟೊಂದು ಮಹತ್ವ?
ಬ್ಲ್ಯಾಕ್ ಬಾಕ್ಸ್ ಎಂಬ ಹೆಸರಿದ್ದರೂ ವಾಸ್ತವದಲ್ಲಿ ಅದು ಕಪ್ಪು ಬಣ್ಣದ್ದಲ್ಲ. ಅದು ಅತ್ಯಂತ ಕೆಟ್ಟ ಅಪಘಾತದಲ್ಲಿಯೂ ಸುರಕ್ಷಿತವಾಗಿರುವಂತೆ ರೂಪಿಸಲಾಗಿರುವ ಉಜ್ವಲ ಕಿತ್ತಳೆ ಬಣ್ಣದ ಸಾಧನವಾಗಿದೆ. ಇದು ತನಿಖಾಧಿಕಾರಿಗಳು ವಿಮಾನ ಅಪಘಾತದ ಕೊನೆಯ ಕ್ಷಣಗಳಲ್ಲಿ ಏನಾಗಿತ್ತು ಎಂಬ ಮಾಹಿತಿಗಳನ್ನು ಒಟ್ಟುಗೂಡಿಸಲು ನೆರವಾಗುವ ನಿರ್ಣಾಯಕ ದತ್ತಾಂಶಗಳನ್ನು ಒಳಗೊಂಡಿರುತ್ತದೆ.
ಬ್ಲ್ಯಾಕ್ ಬಾಕ್ಸ್ ಏನು ಮಾಡುತ್ತದೆ?
ವಿಮಾನದ ಬ್ಲ್ಯಾಕ್ ಬಾಕ್ಸ್ ಕೇವಲ ಒಂದು ಸಾಧನವಲ್ಲ. ಅದು ಒಂದು ಕವಚದಲ್ಲಿ ಅಳವಡಿಸಲಾದ ಎರಡು ಘಟಕಗಳನ್ನು ಒಳಗೊಂಡಿರುತ್ತದೆ.
1. ಫ್ಲೈಟ್ ಡೇಟಾ ರೆಕಾರ್ಡರ್(ಎಫ್ಡಿಆರ್): ಇದು ವೇಗ, ಎತ್ತರ, ಇಂಜಿನ್ ಕಾರ್ಯಕ್ಷಮತೆ ಮತ್ತು ನೇವಿಗೇಶನ್ನಂತಹ ವಿಮಾನದ ತಾಂತ್ರಿಕ ದತ್ತಾಂಶಗಳನ್ನು ದಾಖಲಿಸಿಕೊಳ್ಳುತ್ತದೆ.
2. ಕಾಕ್ಪಿಟ್ ವಾಯ್ಸ್ ರೆಕಾರ್ಡರ್(ಸಿವಿಆರ್): ಇದು ಪೈಲಟ್ಗಳ ನಡುವಿನ ಸಂಭಾಷಣೆ, ವಿಮಾನದ ಡೆಕ್ನಿಂದ ಬರುವ ಇತರ ಶಬ್ದಗಳು ಸೇರಿದಂತೆ ಕಾಕ್ಪಿಟ್ನಲ್ಲಿಯ ಆಡಿಯೋವನ್ನು ಸಂಗ್ರಹಿಸುತ್ತದೆ.
ಇವೆರಡೂ ಸಾಧನಗಳು ಒಟ್ಟಾಗಿ 25 ಗಂಟೆಗಳ ಹಾರಾಟದ ದತ್ತಾಂಶಗಳು ಮತ್ತು ಎರಡು ಗಂಟೆಗಳ ಧ್ವನಿ ರೆಕಾರ್ಡಿಂಗ್ಗಳನ್ನು ಸಂಗ್ರಹಿಸುತ್ತವೆ.
ಅಪಘಾತದ ಬಳಿಕ ಬ್ಲ್ಯಾಕ್ ಬಾಕ್ಸ್ ಗೆ ಏಕೆ ಅಷ್ಟೊಂದು ಮಹತ್ವ?
ವಿಮಾನ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬ್ಲ್ಯಾಕ್ ಬಾಕ್ಸ್ ಅತ್ಯಂತ ಅಮೂಲ್ಯವಾದ ಉಪಕರಣವಾಗಿದೆ. ಅದು ತಾಂತ್ರಿಕ ವೈಫಲ್ಯಗಳಿಂದ ಹಿಡಿದು ಮಾನವ ತಪ್ಪುಗಳವರೆಗೆ ಯಾವ ದೋಷವಿತ್ತು ಎಂಬ ಬಗ್ಗೆ ಸುಳಿವುಗಳನ್ನು ತನಿಖಾಧಿಕಾರಿಗಳಿಗೆ ಒದಗಿಸುತ್ತದೆ. ಸುರಕ್ಷತಾ ಶಿಷ್ಟಾಚಾರಗಳನ್ನು ಉತ್ತಮಗೊಳಿಸಲು ಮತ್ತು ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಯುವಲ್ಲಿ ಈ ದತ್ತಾಂಶಗಳು ಪ್ರಮುಖವಾಗಿವೆ.
ಎಲ್ಲ ವಾಣಿಜ್ಯ ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಅಳವಡಿಸುವುದನ್ನು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ಕಡ್ಡಾಯಗೊಳಿಸಿದೆ. ಇಂದು ಸಣ್ಣ ವಿಮಾನಗಳು ಸಹ ಬ್ಲ್ಯಾಕ್ ಬಾಕ್ಸ್ ಹೊಂದಿರುತ್ತವೆ.
ಅಪಘಾತವಾದಾಗ ಬ್ಲ್ಯಾಕ್ ಬಾಕ್ಸ್ ಹೇಗೆ ಸುರಕ್ಷಿತವಾಗಿರುತ್ತದೆ?
ಬ್ಲ್ಯಾಕ್ ಬಾಕ್ಸ್ ಗಳನ್ನು ಎಂತಹುದೇ ಹೊಡೆತವನ್ನು ತಾಳಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಅವುಗಳನ್ನು ವಿಮಾನದ ಬಾಲದ ಬಳಿ ಅಳವಡಿಸಲಾಗುತ್ತದೆ,ಇದು ವಿಮಾನ ಪತನಗೊಂಡಾಗ ಹಾನಿಯಾಗದಿರುವ ಸಾಧ್ಯತೆ ಹೆಚ್ಚಿರುವ ಭಾಗವಾಗಿದೆ.
ಒಂದು ಗಂಟೆ ಕಾಲ 1,100 ಸೆಂಟಿಗ್ರೇಡ್ ತಾಪಮಾನವನ್ನು ತಡೆದುಕೊಳ್ಳುವಂತೆ,ಸಾಗರದಲ್ಲಿ 20,000 ಅಡಿಗಳಷ್ಟು ಕೆಳಗೆ ನೀರಿನ ಒತ್ತಡವನ್ನು ಸಹಿಸಿಕೊಳ್ಳುವಂತೆ,3,400ಜಿ ಪ್ರಭಾವ(ಗುರುತ್ವಾಕರ್ಷಣ ಬಲದ 3400 ಪಟ್ಟು)ದಲ್ಲಿಯೂ ಸುರಕ್ಷಿತವಾಗಿರುವಂತೆ ರೂಪಿಸಲಾಗಿರುತ್ತದೆ.
ಶೋಧ ತಂಡಗಳಿಗೆ ಪತ್ತೆ ಹಚ್ಚಲು ನೆರವಾಗಲು ಬ್ಲ್ಯಾಕ್ ಬಾಕ್ಸ್ 30 ದಿನಗಳ ಕಾಲ ನೀರಿನಡಿ ಲೊಕೇಟರ್ ಸಂಕೇತವನ್ನು ಹೊರಡಿಸುತ್ತಿರುತ್ತದೆ.
ಬ್ಲ್ಯಾಕ್ ಬಾಕ್ಸ್ ಡಿಕೋಡ್ ಮಾಡುವುದು ಸುಲಭವೇ?
ನಿಜವಾಗಿಯೂ ಅಲ್ಲ. ಅದನ್ನು ಹುಡುಕುವುದೇ ಒಂದು ದೊಡ್ಡ ಹೆಜ್ಜೆ. ಬ್ಲ್ಯಾಕ್ ಬಾಕ್ಸ್ ನ್ನು ಡಿಕೋಡ್ ಮಾಡಲು ಆಧುನಿಕ ಉಪಕರಣಗಳು ಅಗತ್ಯವಾಗುತ್ತವೆ ಮತ್ತು ಅದನ್ನು ಡಿಕೋಡ್ ಮಾಡಲು ಹಾನಿಯನ್ನು ಅವಲಂಬಿಸಿ ವಾರಗಳು,ಕೆಲವೊಮ್ಮೆ ತಿಂಗಳುಗಳೇ ಬೇಕಾಗುತ್ತವೆ.
ಒಮ್ಮೆ ವಿಶ್ಲೇಷಿಸಿದ ಬಳಿಕ ದತ್ತಾಂಶಗಳುಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸುವಲ್ಲಿ,ವಿಮಾನದ ವಿನ್ಯಾಸವನ್ನು ಸುಧಾರಿಸುವಲ್ಲಿ ಮತ್ತು ಪೈಲಟ್ ತರಬೇತಿ ಕಾರ್ಯಕ್ರಮಗಳನ್ನು ಮರುರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.







