Madhya Pradesh | “ಮುಂದಿನ ಜನ್ಮದಲ್ಲೂ ಕುರುಡಾಗಿರುತ್ತಿ…” ಎಂದು ಅಂಧ ಮಹಿಳೆಗೆ ಅವಹೇಳನ ಮಾಡಿದ ಬಿಜೆಪಿ ನಾಯಕಿ!

Photo Credit : @SupriyaShrinate
ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ಅಂಧ ಮಹಿಳೆಯೊಬ್ಬರಿಗೆ ಬಿಜೆಪಿಯ ಕಾರ್ಯಕಾರಿಣಿ ಸದಸ್ಯೆ ಅಂಜು ಭಾರ್ಗವ ಅವಹೇಳನಕಾರಿ ಮಾತುಗಳ ಮೂಲಕ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
यह औरत जो एक दृष्टिहीन लड़की के साथ मारपीट कर रही है वो जबलपुर में BJP की उप जिलाध्यक्ष अंजू भार्गव हैं
— Supriya Shrinate (@SupriyaShrinate) December 22, 2025
यह जाहिलियत और क्रूरता करना BJP में आगे बढ़ने का सबसे आसान तरीका है
धब्बे हैं यह लोग समाज पर
pic.twitter.com/tgsxjzhaLA
ಈ ಘಟನೆ ಡಿಸೆಂಬರ್ 20ರಂದು ಜಬಲ್ಪುರದ ಗೋರಖ್ ಪುರ ಪ್ರದೇಶದಲ್ಲಿರುವ ಚರ್ಚ್ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದದ್ದು ಎಂದು ತಿಳಿದು ಬಂದಿದೆ. ಸಂಘಪರಿವಾರದ ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು, ಅಂಧ ವಿದ್ಯಾರ್ಥಿಗಳನ್ನು ಮತಾಂತರ ಉದ್ದೇಶದಿಂದ ಚರ್ಚ್ಗೆ ಕರೆತರಲಾಗಿದೆ ಎಂಬ ಆರೋಪಿಸಿ ಚರ್ಚ್ ಎದುರು ಜಮಾಯಿಸಿದ್ದರು.
ವೈರಲ್ ಆಗಿರುವ ವೀಡಿಯೊದಲ್ಲಿ, ಅಂಜು ಭಾರ್ಗವ ಮಹಿಳೆಯ ಅಂಗವೈಕಲ್ಯವನ್ನು ಉಲ್ಲೇಖಿಸಿ “ಈ ಜನ್ಮದಲ್ಲಿ ಕುರುಡಾಗಿದ್ದಿ, ಮುಂದಿನ ಜನ್ಮದಲ್ಲೂ ಕುರುಡಾಗಿರುತ್ತೀ” ಎಂಬ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ, ಆಕೆಯ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಪ್ರಶ್ನೆಗಳನ್ನೂ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ವೈರಲ್ ಆಗಿರುವ ದೃಶ್ಯಾವಳಿಗಳಲ್ಲಿ ಮಹಿಳೆಯ ಕೈ ಹಿಡಿದು ವಾಗ್ವಾದ ನಡೆಸುತ್ತಿರುವುದು, ಪರಿಸ್ಥಿತಿ ಉದ್ವಿಗ್ನಗೊಂಡಾಗ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿರುವುದು ಕಂಡುಬರುತ್ತದೆ.
ಮೂಲಗಳ ಪ್ರಕಾರ, ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಅಂಜು ಭಾರ್ಗವ ಅವರು ಚರ್ಚ್ ಆವರಣದಲ್ಲಿ ಮಕ್ಕಳು ಹಾಗೂ ಅಂಗವಿಕಲ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹವಾಬಾಗ್ ಕಾಲೇಜಿಗೆ ಕರೆತಂದು ಅವರನ್ನು ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂದು ಕೆಲ ಸಂಘಟನೆಗಳು ಆರೋಪಿಸಿವೆ.
ವೀಡಿಯೊ ಬಹಿರಂಗವಾದ ನಂತರ, ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಅವರು,”ಅಂಧ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ, ಈ ಮಹಿಳೆ ಜಬಲ್ಪುರದ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷೆಯಾಗಿರುವ ಅಂಜು ಭಾರ್ಗವ್. ಈ ಅಜ್ಞಾನ ಮತ್ತು ಕ್ರೌರ್ಯದಿಂದ ಬಿಜೆಪಿಯಲ್ಲಿ ಮುಂದೆ ಬರುವುದು ಸುಲಭ ಮಾರ್ಗವಾಗಿದೆ. ಇವರೆಲ್ಲಾ ಸಮಾಜದ ಮೇಲಿನ ಕಳಂಕ”, ಎಂದು ಎಕ್ಸ್ ಪೋಸ್ಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.







