ಜಾರ್ಖಂಡ್ | ರೈಲ್ವೇ ದಿಗ್ಭಂಧನ ಹಿಂಪಡೆದ ಕುರ್ಮಿ ಸಮುದಾಯ

Photo Credit: ANI
ರಾಂಚಿ, ಸೆ. 21: ಜಾರ್ಖಂಡ್ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿದ್ದ ರೈಲ್ವೆ ದಿಗ್ಭಂಧನ ಹೋರಾಟವನ್ನು ಕುರ್ಮಿ ಸಮುದಾಯ ರವಿವಾರ ಹಿಂಪಡೆದಿದೆ.
ಕುರ್ಮಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನ ಮಾನ ಹಾಗೂ ಕುರ್ಮಾಲಿ ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಆಗ್ರಹಿಸಿ ಕುರ್ಮಿ ಸಮುದಾಯ ರೈಲ್ವೇ ದಿಗ್ಭಂದನ ಹೋರಾಟ ನಡೆಸುತ್ತಿತ್ತು.
ಕುರ್ಮಿ ಸಂಘಟನೆಯ ಮಾತೃ ಸಂಸ್ಥೆಯಾದ ಆದಿವಾಸಿ ಕುರ್ಮಿ ಸಮಾಜ ಪಶ್ಚಿಮಬಂಗಾಳ, ಜಾರ್ಖಂಡ್ ಹಾಗೂ ಒಡಿಶಾದಲ್ಲಿ ಶನಿವಾರ ಪ್ರತಿಭಟನೆ ಆಯೋಜಿಸಿತ್ತು.
ಕುರ್ಮಿ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸ್ಥಾನ ಮಾನ ನೀಡುವ ಕುರಿತು ಚರ್ಚಿಸಲು ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ಕೇಂದ್ರ ಸರಕಾರ ಭರವಸೆ ನೀಡಿದ ಬಳಿಕ ಕುರ್ಮಿ ಸಮುದಾಯ ರೈಲ್ವೆ ದಿಗ್ಭಂದನ ಹೋರಾಟವನ್ನು ನಿಲ್ಲಿಸಿದೆ.
ಸಭೆ ನಡೆಸುವ ಭರವಸೆ ಕುರಿತು ಅಮಿತ್ ಶಾ ಅವರ ಕಚೇರಿಯಿಂದ ಸಂದೇಶ ಸ್ವೀಕರಿಸಲಾಗಿದೆ. ಆದರೆ, ಇದುವರೆಗೆ ದಿನಾಂಕ ನಿಗದಿ ಆಗಿಲ್ಲ ಎಂದು ಆದಿವಾಸಿ ಕುರ್ಮಿ ಸಮಾಜದ ಸದಸ್ಯ ಹಾಗೂ ಕುರ್ಮಿ ವಿಕಾಸ ಮೋರ್ಚಾ ಸೆಂಟ್ರಲ್ನ ಅಧ್ಯಕ್ಷ ಶೀತಲ್ ಒಹ್ದಾರ್ ತಿಳಿಸಿದ್ದಾರೆ.
ಎಲ್ಲ ರೈಲು ನಿಲ್ದಾಣಗಳಿಂದ ದಿಗ್ಭಂಧನವನ್ನು ಶನಿವಾರ ರಾತ್ರಿಯೇ ಹಿಂಪಡೆಯಲಾಗಿದೆ. ಸರಾಯ್ಕೆಲಾ-ಖರಸಾವ ಜಿಲ್ಲೆಯ ಸಿನಿ ಹಾಗೂ ಧನಾಬಾದ್ ಜಿಲ್ಲೆಯ ಪ್ರಧಾನಖಾಂಟಾ ನಿಲ್ದಾಣಗಳ ದಿಗ್ಬಂಧನವನ್ನು ರವಿವಾರ ಬೆಳಗ್ಗೆ ಹಿಂಪಡೆಯಲಾಗಿದೆ ಒಹ್ದಾರ್ ತಿಳಿಸಿದ್ದಾರೆ.







