ಬಿಎಂಸಿ ಚುನಾವಣೆ ಸೀಟು ಹಂಚಿಕೆ ಕಸರತ್ತು: ಬಿಜೆಪಿ 137, ಶಿವಸೇನಾ 90 ಸ್ಥಾನಗಳಿಗೆ ಸ್ಪರ್ಧೆ

Credit: X/@AmeetSatam
ಮುಂಬೈ,ಡಿ.30 : ಸಮಾಲೋಚನೆ ಹಾಗೂ ಮಾತುಕತೆಗಳ ಬಳಿಕ ಬಿಜೆಪಿಯು ಬೃಹನ್ಮುಂಬಯಿ ಮಹಾನಗರಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಸ್ಪರ್ಧಿಸಲು ಏಕನಾಥ ಶಿಂಧೆ ನೇತೃತ್ವದ ಶಿವಸೇನಾಗೆ 90 ಸ್ಥಾನಗಳನ್ನು ನೀಡಲು ಒಪ್ಪಿಕೊಂಡಿದೆ. ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಸ್ಪರ್ಧಿಸುವ ಯೋಜನೆಯನ್ನು ಹೊಂದಿದ್ದ ಬಿಜೆಪಿ ಈಗ 137 ಸ್ಥಾನಗಳಲ್ಲಿ ಕಣಕ್ಕಿಳಿಯಲು ನಿರ್ಧರಿಸಿದೆ.
ಮಹಾಯುತಿ ಮೈತ್ರಿಕೂಟದ ಒಡಂಬಡಿಕೆಯಂತೆ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳು, ತಮ್ಮ ಪಾಲಿಗೆ ದೊರೆತಿರುವ ಸೀಟುಗಳ ಪೈಕಿ ಕೆಲವನ್ನು ಮಹಾಯುತಿ ಮೈತ್ರಿಕೂಟದ ಅಂಗಪಕ್ಷಗಳಿಗೆ ಬಿಟ್ಟುಕೊಡಲಿವೆ ಎಂದು ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಅಮಿತ್ ಸತಾಮ್ ತಿಳಿಸಿದ್ದಾರೆ.
‘‘ಬಿಎಂಸಿ ಚುನಾವಣೆಯಲ್ಲಿ ಉಭಯ ಪಕ್ಷಗಳೂ ಜಂಟಿಯಾಗಿ ಪ್ರಚಾರವನ್ನು ನಡೆಸಲಿವೆ.ಮುಂಬೈನ ಬಣ್ಣ ಬದಲಾಗುವುದಕ್ಕೆ ಬಿಡಲಾರೆವು. ಮುಂಬೈನ ಭದ್ರತೆ ಹಾಗೂ ಸುರಕ್ಷತೆಯೇ ನಮ್ಮ ಧ್ಯೇಯವಾಗಿದೆ. ಈಗಾಗಲೇ 200ಕ್ಕೂ ಅಧಿಕ ಸೀಟುಗಳಿಗೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವೇರ್ಪಟ್ಟಿದೆ. ಇನ್ನು ಕೇವಲ 27 ಸೀಟುಗಳಷ್ಟೇ ಬಾಕಿಯುಳಿದಿದ್ದು, ಅವುಗಳನ್ನು ಸೌಹಾರ್ದಯುತವಾಗಿ ವಿತರಿಸಲಾಗುವುದು ಎಂದರು. ಮಂಗಳವಾರದೊಳಗೆ ನಾಮಪತ್ರವನ್ನು ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ’’ ಎಂದು ಸತಾಮ್ ತಿಳಿಸಿದರು. ಬಿಜೆಪಿ- ಶಿವಸೇನಾ ಸೀಟು ಹಂಚಿಕೆಯ ಒಪ್ಪಂದ ಘೋಷಣೆಯಾದ ಬೆನ್ನಲ್ಲೇ ಮಹಾಯುತಿ ಮೈತ್ರಿಕೂಟದ ಅಂಗಪಕ್ಷವಾದ ಆರ್ಪಿಐ (ಎ)ನ ಅಧ್ಯಕ್ಷ, ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿಕೆಯೊಂದನ್ನು ನೀಡಿ ಬಿಜೆಪಿ ತಮ್ಮನ್ನು ವಂಚಿಸಿದೆಯೆಂದು ಆಪಾದಿಸಿದ್ದಾರೆ.
ಸೀಟು ಹಂಚಿಕೆ ಕುರಿತ ಮಾತುಕತೆಗಾಗಿ ಸಂಜೆ 4 ಗಂಟೆಗೆ ಪಕ್ಷದ ಸದಸ್ಯರನ್ನುಕರೆಯಲಾಗಿತ್ತು. ಆದರೆ ಅವರೊಂದಿಗೆ ಯಾರೂ ಮಾತುಕತೆ ನಡೆಸಲಿಲ್ಲ. ಇದರಿಂದ ಪಕ್ಷದ ಕಾರ್ಯಕರ್ತರು ಅಸಂತೃಪ್ತಿಗೊಂಡಿದ್ದು, ಅವರು ಚುನಾವಣೆಯಲ್ಲಿ ವಿಭಿನ್ನವಾದ ನಿಲುವನ್ನು ಕೈಗೊಳ್ಳಲಿದ್ದಾರೆ ಮತ್ತು ಅವರ ನಿರ್ಧಾರವನ್ನು ತಾನು ಕೂಡಾ ಒಪ್ಪಿಕೊಳ್ಳುವುದಾಗಿ ಅಠವಳೆ ಹೇಳಿದ್ದಾರೆ.
110 ಸೀಟುಗಳನ್ನು ತನ್ನ ಪಕ್ಷಕ್ಕೆ ಬಿಟ್ಟುಕೊಡಬೇಕೆಂಬ ಏಕಕನಾಥ ಶಿಂಧೆ ಅವರ ಬೇಡಿಕೆಗೆ ವಿರುದ್ಧವಾಗಿ ಬಿಜೆಪಿ 50 ಸೀಟು ನೀಡಲು ಹೊರಟಿತ್ತು. ಆದರೆ ಶಿಂಧೆ, ಪಟ್ಟು ಸಡಿಲಿಸದ ಕಾರಣ, ಬಿಜೆಪಿ ತನ್ನ ಪಾಲಿನ ಕೋಟಾದ 13 ಸೀಟುಗಳು ಸೇರಿದಂತೆ ಒಟ್ಟು 90 ಸೀಟುಗಳನ್ನು ಶಿವಸೇನಾಗೆ ಬಿಟ್ಟುಕೊಡಬೇಕಾಯಿತು. ಅಲ್ಲದೆ, ತನ್ನ ಪಾಲಿನ ಕೋಟಾದಿಂದ ಉಳಿದ ಮಿತ್ರಪಕ್ಷಗಳಿಗೆ ಅದು ನೀಡಬೇಕಾಗಿದೆ’’ ಎಂದವರು ಹೇಳಿದರು.







