ಬಿಎಂಸಿ ಚುನಾವಣೆ: ಕೆಲವೇ ಗಂಟೆಗಳಲ್ಲಿ ಮಾಯವಾದ ‘ಅಳಿಸಲಾಗದ’ ಶಾಯಿಯನ್ನು ಪ್ರಶ್ನಿಸಿದ ವಿಶಾಲ್ ದದ್ಲಾನಿ

ವಿಶಾಲ ದದ್ಲಾನಿ | Photo Credit : vishaldadlani \ instagram.com
ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ ತಾನು ಮತ ಚಲಾಯಿಸಿದ ಬಳಿಕ ತನ್ನ ಬೆರಳಿನ ಮೇಲಿನ ಶಾಯಿಯ ಗುರುತು ತ್ವರಿತವಾಗಿ ಮಾಯವಾಗುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಗಾಯಕ ವಿಶಾಲ ದದ್ಲಾನಿಯವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
‘ಅಳಿಸಲಾದ ಶಾಯಿ ಮತದಾನದ ಕೆಲವೇ ಗಂಟೆಗಳ ಬಳಿಕ ಕಾಣುತ್ತಲೇ ಇಲ್ಲ. ನಾನು ಶಾಯಿಯನ್ನು ತೆಗೆಯಲು ಪ್ರಯತ್ನಿಸಿರಲಿಲ್ಲ. ನಾನು ಸಾಮಾನ್ಯವಾಗಿ ಕೈಕುಲುಕಿದ ಬಳಿಕ ಸ್ಯಾನಿಟೈಸರ್ ಬಳಸುತ್ತೇನೆ,ಆದರೆ ಇದು ಖಂಡಿತವಾಗಿಯೂ ಅಳಿಸಲಾಗದ ಶಾಯಿಯಲ್ಲ. ಇದನ್ನು ದೃಢಪಡಿಸಬಲ್ಲೆ,ಅಗತ್ಯವಾದರೆ ಅಧಿಕೃತ ಹೇಳಿಕೆಯನ್ನೂ ನೀಡಲು ಸಿದ್ಧನಿದ್ದೇನೆ’ ಎಂದು ದದ್ಲಾನಿ ಗುರುವಾರ ರಾತ್ರಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.
ಕೆಲವು ಮತಗಟ್ಟೆಗಳಲ್ಲಿ ಅಳಿಸಲಾಗದ ಶಾಯಿಯ ಬದಲು ಮಾರ್ಕರ್ ಪೆನ್ಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿ ಹಲವಾರು ಮತದಾರರು ವ್ಯಕ್ತಪಡಿಸಿರುವ ಕಳವಳಗಳನ್ನು ದದ್ಲಾನಿಯವರ ಪೋಸ್ಟ್ ಪ್ರತಿಧ್ವನಿಸಿದೆ.
ನಾಗ್ಪುರದಲ್ಲಿಯೂ ಇದೇ ಆಗಿದೆ. ಮೊದಲು ಶಾಯಿ ಕೆಲವು ವಾರಗಳವರೆಗೆ ಇರುತ್ತಿತ್ತು,ಈಗ ಒಂದೇ ದಿನದಲ್ಲಿ ಮಾಯವಾಗಿದೆ ಎಂದು ಬಳಕೆದಾರರೋರ್ವರು ಕಾಮೆಂಟ್ ಮಾಡಿದ್ದಾರೆ.
ತಾನು ಮಾರ್ಕರ್ ಪೆನ್ ಬಳಕೆಯನ್ನು ಆಕ್ಷೇಪಿಸಿದಾಗ ಮತಗಟ್ಟೆಯ ಅಧಿಕಾರಿ, ‘ನಮಗೆ ಇದನ್ನೇ ನೀಡಲಾಗಿದೆ. ನಿಮಗೆ ಸಮಸ್ಯೆಯಿದ್ದರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬಹುದು’ ಎಂದು ತಿಳಿಸಿದ್ದಾಗಿ ಇನ್ನೋರ್ವರು ಬರೆದಿದ್ದಾರೆ.







