BMC ಚುನಾವಣೆ: ಬಿಜೆಪಿಯ ಮೂರನೇ ಒಂದರಷ್ಟು ಸ್ಥಾನಗಳಷ್ಟೇ ಗೆದ್ದರೂ ಶಿಂಧೆ ‘ಕಿಂಗ್ಮೇಕರ್’!

PC: x.com/ndtv
ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ನೇತೃತ್ವದ ಮಹಾಯುತಿ ಕೂಟ ಸಜ್ಜಾಗಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆಯ 227 ಸ್ಥಾನಗಳ ಪೈಕಿ ಮಹಾಯುತಿ ಕೂಟ 118 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 89 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದ್ದರೆ, ಮಿತ್ರಪಕ್ಷ ಶಿವಸೇನೆ (ಶಿಂಧೆ ಬಣ) 29 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
2022ರ ವರೆಗೆ 25 ವರ್ಷಗಳ ಕಾಲ ಠಾಕ್ರೆ ಕುಟುಂಬದ ಹಿಡಿತದಲ್ಲಿದ್ದ ಬಿಎಂಸಿ ಇದೀಗ ಉದ್ಧವ್ ಠಾಕ್ರೆ ಅವರ ಕೈತಪ್ಪುವುದು ನಿಶ್ಚಿತವಾಗಿದೆ.
ಆದಾಗ್ಯೂ ಬಿಜೆಪಿಯ ಮೂರನೇ ಒಂದರಷ್ಟು ಸ್ಥಾನಗಳನ್ನು ಮಾತ್ರ, ಅಂದರೆ ಕೇವಲ 29 ಸ್ಥಾನಗಳನ್ನು ಗೆದ್ದಿರುವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಬಹುಮತಕ್ಕೆ 114 ಸ್ಥಾನಗಳ ಅಗತ್ಯವಿರುವ ಹಿನ್ನೆಲೆಯಲ್ಲಿ, ಬಿಜೆಪಿ ಶಿಂಧೆ ಅವರ ಒತ್ತಡ ತಂತ್ರಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಒಟ್ಟಿನಲ್ಲಿ ಕೇವಲ 29 ಸ್ಥಾನಗಳನ್ನು ಗೆದ್ದಿದ್ದರೂ ಶಿಂಧೆ ‘ಕಿಂಗ್ಮೇಕರ್’ ಆಗುವ ಎಲ್ಲ ಸಾಧ್ಯತೆಗಳಿವೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
“ಬಿಎಂಸಿ ಮೇಯರ್ ಹುದ್ದೆ ಶಿವಸೇನೆ (ಶಿಂಧೆ ಬಣ)ಗೆ ಸಿಗಬೇಕು ಎಂಬ ಅಂಶವನ್ನು ಬಿಜೆಪಿಗೆ ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಇದು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯ ಪ್ರಶ್ನೆ” ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.
2024ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶಿಂಧೆ ಬಣ ಕೇವಲ 57 ಸ್ಥಾನಗಳನ್ನು ಹೊಂದಿದ್ದರೂ, 132 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಶಿಂಧೆಗೆ ಬಿಟ್ಟುಕೊಟ್ಟ ರೀತಿಯಲ್ಲೇ, ಬಿಎಂಸಿಯಲ್ಲೂ ಮೇಯರ್ ಹುದ್ದೆಯನ್ನು ಬಿಟ್ಟುಕೊಡಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
“ನಮ್ಮ ಕಾರ್ಯಸೂಚಿ ಅಭಿವೃದ್ಧಿಯೇ. ನಾವು ಮಹಾಯುತಿಯಾಗಿ ಚುನಾವಣೆ ಎದುರಿಸಿದ್ದೇವೆ. ಇಂದಿಗೂ ಒಟ್ಟಿಗೆ ಕುಳಿತು ಚರ್ಚಿಸಿ, ಮುಂಬೈ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಂತಿಮ ಫಲಿತಾಂಶಗಳ ಪ್ರಕಾರ, ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 89, ಶಿವಸೇನೆ (ಯುಬಿಟಿ) 65, ಶಿವಸೇನೆ (ಶಿಂಧೆ ಬಣ) 29, ಕಾಂಗ್ರೆಸ್ 24, ಎಂಎನ್ಎಸ್ 6, ಎನ್ಸಿಪಿ (ಅಜಿತ್ ಪವಾರ್) 3 ಹಾಗೂ ಎನ್ಸಿಪಿ (ಶರದ್ ಪವಾರ್) 1 ಸ್ಥಾನಗಳನ್ನು ಗೆದ್ದಿವೆ. ಉಳಿದ 10 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಿದ್ದಾರೆ.







