ಮುಂಬೈ | ಮ್ಯಾಥೆರಾನ್ ಗಿರಿಧಾಮದ ಕಂದರದಲ್ಲಿ ಬೆಂಗಳೂರು ನಿವಾಸಿಯ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ, ಅ.20: ಬೆಂಗಳೂರಿನ ಬೇಲಾಪುರದ ನಿವಾಸಿ ಪ್ರೊ.ಷಣ್ಮುಗ ಎಸ್. ಬಾಲಸುಬ್ರಮಣಿಯಂ ಅವರು ಮೃತದೇಹವು ಮುಂಬೈ ಸಮೀಪದ ಗಿರಿಧಾಮ ಮಾಥೆರಾನ್ನಲ್ಲಿ ಆಳವಾದ ಕಂದರವೊಂದರಲ್ಲಿ ಮಂಗಳವಾರ ಪತ್ತೆಯಾಗಿದೆ.
ಬಾಲಸುಬ್ರಮಣಿಯಂ ಅವರು ಮಾಥೆರಾನ್ನ ಹೊಟೇಲೊಂದರಲ್ಲಿ ಆಕ್ಟೋಬರ್ 13 ಹಾಗೂ 16ರ ನಡುವೆ ತಂಗಲು ಆನ್ಲೈನ್ ಮೂಲಕ ರಿಸರ್ವೇಶನ್ ಮಾಡಿದ್ದರು.
‘‘ಆಕ್ಟೋಬರ್ 15ರಂದು ಹೊಟೇಲ್ನಿಂದ ಹೊರಗೆ ಹೋದ ಅವರು ನಾಪತ್ತೆಯಾಗಿದ್ದರು. ಆ ಬಳಿಕ ಹೊಟೇಲ್ನ ಆಡಳಿತಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದರು. ನಾಪತ್ತೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರು ಶೋ‘ ಕಾರ್ಯವನ್ನು ತೀವ್ರಗೊಳಿಸಿದಾಗ ಅವರ ಮೃತದೇಹವು ರವಿವಾರ ಇಕೋ ಪಾಯಿಂಟ್ನಲ್ಲಿ ಪತ್ತೆಯಾಗಿದೆ. ಈ ಮೃತದೇಹವನ್ನು ಖಾಸಗಿ ರಕ್ಷಣಾ ತಂಡವೊಂದರ 17 ಮಂದಿ ಸದಸ್ಯರು ಕಂದರದಿಂದ ಮೇಲಕ್ಕೆತ್ತಿದ್ದಾರೆ.
ಅವರ ಹಿರಿಯ ಸಹೋದರ ಮೃತದೇಹವನ್ನು ಗುರುತಿಸಿದ್ದಾರೆ. ಇದೊಂದು ಆಕಸ್ಮಿಕ ಸಾವಿನ ಪ್ರಕರಣವೆಂದು ಗುರುತಿಸಲಾಗಿದೆ. ಆದರೆ ಆತ್ಮಹತ್ಯೆ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





